ಮಂಡ್ಯ: ಒಳ ಮೀಸಲಾತಿ ಜಾರಿ ಮಾಡುವಲ್ಲಿ ಬಲಾಡ್ಯ ಪರಿಶಿಷ್ಟ ಸಮುದಾಯಗಳನ್ನು ಓಲೈಸುವ ಭರದಲ್ಲಿ ದುರ್ಬಲ ಅಲೆಮಾರಿ ಸಮುದಾಯಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಅಖಿಲ ಕರ್ನಾಟಕ ಡಾ|| ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್ ಗಂಭೀರ ಆರೋಪ ಮಾಡಿದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಾನೇ ರಚನೆ ಮಾಡಿದ್ದ ನ್ಯಾ|| ನಾಗಮೋಹನ್ ದಾಸ್ ವರದಿಯ ಅಂಶಗಳಿಗೆ ತಿಲಾಂಜಲಿ ನೀಡಿದೆ. ಈಗಾಗಲೇ ಇರುವ ವರದಿಗಳನ್ನು ಅಲ್ಲಗಳೆದು ತಾನಾಗಿಯೇ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿ ವರದಿ ನೀಡಲು ಹೇಳಿತ್ತು. ಆಯೋಗವು ಒಳ ಮೀಸಲಾತಿಗೆ ಸಂಬಂಧಿಸಿದ ವರದಿ ನೀಡುವಾಗ 59 ಅಲೆಮಾರಿ ಸಮುದಾಯ ಗಳನ್ನು ಒಂದು ಗುಂಪು ಮಾಡಿ ಶೇ 1 ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ಈ ಗುಂಪನ್ನೇ ರದ್ದು ಮಾಡಿ ಬಲಿಷ್ಠ ಅಸ್ಪೃಶ್ಯ ಜಾತಿಗಳೊಂದಿಗೆ ದುರ್ಬಲ ಅಲೆಮಾರಿಗಳನ್ನು ಸೇರ್ಪಡೆ ಮಾಡಿ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.
ಒಳ ಮೀಸಲಾತಿಯ ಮೂಲ ಉದ್ದೇಶವೇ ಸೌಲಭ್ಯ, ವಿದ್ಯೆ, ಸಂಪತ್ತು ಮತ್ತು ನೌಕರಿಯಿಂದ ವಂಚಿತರಾದ ಜನಾಂಗಕ್ಕೆ ಅವಕಾಶ ನೀಡುವುದು.
ಆದರೆ, ಸರ್ಕಾರವು ಬಲಾಢ್ಯ ಸಮುದಾಯಗಳ ಜೊತೆ ಅಲೆಮಾರಿಗಳನ್ನು ಸೇರಿಸುವ ಮೂಲಕ ಸಾಮಾಜಿಕ ಅನ್ಯಾಯ ಮಾಡಿದೆ ಎಂದು ದೂರಿದರು.
ಅಲೆಮಾರಿ ಜನಾಂಗಕ್ಕೆ ಆದಷ್ಟು ಬೇಗ ಸರ್ಕಾರ ಶೇಕಡಾ 1 ರಷ್ಟು ಮೀಸಲಾತಿ ನೀಡಬೇಕು ಇಲ್ಲದಿದ್ದರೆ ನಿರಂತರವಾಗಿ ಈ ಹೋರಾಟ ಮುಂದುವರೆಸಲಾಗುವುದು ಎಂದು ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದಾಗಲೇ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಹೋರಾಟ ಆರಂಭವಾಗಿ ಕಾಂಗ್ರೆಸ್ ಪಕ್ಷದಿಂದಲೇ ಅಂತ್ಯ ಕಂಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸಚಿವ ಹೆಚ್.ಆಂಜನೇಯ ಅವರುಗಳಿಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಅಭಿನಂದನೆ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಚೇಲ, ಆದೀಶ್, ಚಾಮನಹಳ್ಳಿ ಮಂಜು, ಸೋಮಶೇಖರ್, ಕುಮಾರ್, ಅಶೋಕ್, ನಿಂಗರಾಜು, ಲೋಕೇಶ್, ಹನುಮಂತು, ಮುರಳಿ, ಭಾನುಪ್ರಕಾಶ್, ಮಂಜುನಾಥ್, ಅಪ್ಪಾಜಿ, ಆನಂದ್ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ