ನವದೆಹಲಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಭರ್ಜರಿ ಜಯಗಳಿಸಿದ ನಂತರ ಎದುರಾಗಿದ್ದ ‘ಮುಖ್ಯಮಂತ್ರಿ ಯಾರು?’ ಎಂಬ ಗೊಂದಲಕ್ಕೆ ಇಂದು ತೆರೆ ಬೀಳಲಿದೆ. ದೆಹಲಿಯಲ್ಲಿ ನಡೆದ ಸರಣಿ ಸಭೆಗಳ ನಂತರ, ಕಾಂಗ್ರೆಸ್ ಹೈಕಮಾಂಡ್ ಮೇ 14ರಂದು (ಇಂದು) ಅಧಿಕೃತವಾಗಿ ಮುಖ್ಯಮಂತ್ರಿಯ ಹೆಸರನ್ನು ಪ್ರಕಟಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ಗಾದಿಗಾಗಿ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಕೇರಳದ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದು, ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಇಂದು ತಿರುವನಂತಪುರಂನ ‘ಇಂದಿರಾ ಭವನ’ದಲ್ಲಿ ಕಾಂಗ್ರೆಸ್‌ನ ನೂತನ ಶಾಸಕರ ಸಭೆ ಕರೆಯಲಾಗಿದ್ದು, ಹೈಕಮಾಂಡ್ ತನ್ನ ನಿರ್ಧಾರವನ್ನು ಅಲ್ಲಿ ತಿಳಿಸಲಿದೆ.
140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಎಡರಂಗದ (LDF) ಆಡಳಿತಕ್ಕೆ ಅಂತ್ಯ ಹಾಡಿದೆ.








