ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು ಜನರು ಬಿಸಿಲಿನ ಶಾಕಕ್ಕೆ ತತ್ತರಿಸಿ ಹೋಗಿದ್ದಾರೆ.ಹಾಗಾಗಿ ಉತ್ತರ ಕರ್ನಾಟಕದ ಆರು ಜಿಲ್ಲೆಗಳಿಗೆ ಮುಂದಿನ ಐದು ದಿನ ಬಿಸಿ ಗಾಳಿಯ ರೆಡ್ ಅಲರ್ಟ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ರೆಡ್ ಅಲರ್ಟ್ ಹಾಗೂ ಕಲಬುರ್ಗಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲು
ಜಿಲ್ಲೆಯ ಕಾಳಗಿ ತಾಲೂಕು ಹಾಗೂ ಸುತ್ತಲಿನ ಪರಿಸರದಲ್ಲಿ ಗರಿಷ್ಠ 46.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಕಲಬುರಗಿ ಜಿಲ್ಲೆಯಲ್ಲಿ ಕಳೆದ 4 ದಿನದಿಂದ ಉಷ್ಣ ಅಲೆಗಳು ರಾಚುತ್ತಿವೆ. ಇದರಿಂದಾಗಿ ಜನಜೀವನ ಜಿಲ್ಲಾದ್ಯಂತ ತತ್ತರಿಸಿಹೋಗಿದೆ. ಜನ ರಣ ಬಿಸಿಲಿಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆಯವರೆಗೂ ಹೊರಗಡೆ ಹೋಗದೆ ನೆರಳಲ್ಲಿ ಇರುವಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಜಿಲ್ಲೆಯ ಜನತೆಗೆ ಮನವಿ ಮಾಡಿದೆ.