ಕೋಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಅವರು, ಪದಗ್ರಹಣದ ಬೆನ್ನಲ್ಲೇ ತಮ್ಮ ರಾಜಕೀಯ ನಡೆಯ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ. ಸಮಾರಂಭದ ವೇಳೆ ಕಾರ್ಯಕರ್ತರು ಹಾಕುತ್ತಿದ್ದ ‘ಜೈ ಶ್ರೀರಾಮ್’ ಘೋಷಣೆಗಳನ್ನು ತಡೆದ ಅವರು, “ನಾನು ಈಗ ಕೇವಲ ಒಂದು ಪಕ್ಷದ ನಾಯಕನಲ್ಲ, ಇಡೀ ರಾಜ್ಯದ ಜನರ ಮುಖ್ಯಮಂತ್ರಿ” ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಭೂತಪೂರ್ವ ಗೆಲುವಿನ ನಂತರ ನಡೆದ ಈ ಸಮಾರಂಭದಲ್ಲಿ ಸುವೇಂದು ಅಧಿಕಾರಿ ಅವರು ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಮಂತ್ರವನ್ನು ಜಪಿಸಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಬೆಂಬಲಿಗರು ಉತ್ಸಾಹದಿಂದ ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಈ ವೇಳೆ ತಕ್ಷಣವೇ ಮಧ್ಯಪ್ರವೇಶಿಸಿದ ಸುವೇಂದು, ಕೈ ಸನ್ನೆ ಮಾಡುವ ಮೂಲಕ ಘೋಷಣೆಗಳನ್ನು ನಿಲ್ಲಿಸುವಂತೆ ಸೂಚಿಸಿದರು.
“ಚುನಾವಣೆ ಮುಗಿದಿದೆ, ಈಗ ಆಡಳಿತದ ಸಮಯ. ನಾನು ಪಶ್ಚಿಮ ಬಂಗಾಳದ ಪ್ರತಿಯೊಬ್ಬ ನಾಗರಿಕನಿಗೂ ಮುಖ್ಯಮಂತ್ರಿ. ಜಾತಿ, ಮತ ಅಥವಾ ರಾಜಕೀಯ ಸಿದ್ಧಾಂತಗಳನ್ನು ಮೀರಿ ಎಲ್ಲರನ್ನೂ ಸಮಾನವಾಗಿ ಕಾಣುವುದು ನನ್ನ ಜವಾಬ್ದಾರಿ” ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು.
ಸುವೇಂದು ಅವರ ಈ ನಡೆಯು ರಾಜ್ಯದ ಅಲ್ಪಸಂಖ್ಯಾತರು ಮತ್ತು ತಟಸ್ಥ ಮತದಾರರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಬಂಗಾಳದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು ಮತ್ತು ಉದ್ಯೋಗ ಸೃಷ್ಟಿ ಮಾಡುವುದು ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.








