ಉಡುಪಿ : ರಾಜ್ಯದಲ್ಲಿ RSS ಚಟುವಟಿಕೆ ಕಡಿವಾಣ ಹಾಕುವ ಬಗ್ಗೆ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದು, ಈ ವಿಚಾರವಾಗಿ ತಾಕತ್ತಿದ್ದರೆ ಆರ್‌ಎಸ್‌ಎಸ್ (RSS) ನಿಷೇಧ ಮಾಡಿ ಚುನಾವಣೆಗೆ ಬನ್ನಿ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಮಾಜಿ ಸಚಿವ ಸುನಿಲ್ ಕುಮಾರ್ ಸವಾಲು ಹಾಕಿದರು.
ಸರ್ಕಾರದ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆಗಳನ್ನು ಬ್ಯಾನ್ ಮಾಡುವಂತೆ ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಈ ಕುರಿತು ಮಾತನಾಡಿದ ಸುನಿಲ್ ಕುಮಾರ್, ಆರ್‌ಎಸ್‌ಎಸ್ ನಿಷೇಧ ಹೇಳಿಕೆ ನಾಚಿಕೆ ಸಂಗತಿ. ಪ್ರಿಯಾಂಕ್ ಖರ್ಗೆ ಅವಿವೇಕಿತನದ ಪತ್ರ ಬರೆದಿದ್ದಾರೆ. ಇವರ ತಂದೆ ಗೃಹ ಸಚಿವರವಾಗಿದ್ದಾಗಲೇ ಆರ್‌ಎಸ್‌ಎಸ್ ಅನ್ನು ಏನೂ ಮಾಡಲು ಆಗಿಲ್ಲ. ಅಧಿಕಾರದ ಮದ, ಸೊಕ್ಕಿನಿಂದ ಈ ರೀತಿಯ ಹೇಳಿಕೆ ಕೊಡುತ್ತಿದ್ದೀರಿ. ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರಾಗಿ ಬರಬಹುದು ಪದೇ ಪದೇ ದುರಹಂಕಾರದಿಂದ ಮಾತನಾಡಬೇಡಿ.
ಇದು ನಿಮ್ಮ ಬೆಳವಣಿಗೆಗೆ ಒಳ್ಳೆಯದಲ್ಲ ಎಂದು ಕಿಡಿಕಾರಿದರು. ಕರ್ನಾಟಕದಲ್ಲಿ ಕೆಟ್ಟ ಸರ್ಕಾರ ಇದೆ. ಮುಖ್ಯಮಂತ್ರಿಗಳಿಗೆ ಸಂಪುಟದಲ್ಲಿ ಹಿಡಿತ ಇಲ್ಲ. ಯಾರು ಏನು ಬೇಕಾದರೂ ಮಾತನಾಡಬಹುದೆಂಬ ಪರಿಸ್ಥಿತಿ ಇದೆ. ದಿನ ಬೆಳಗಾದರೆ ಯಾರು ಮುಖ್ಯಮಂತ್ರಿ, ಯಾರು ಸಚಿವ ಅನ್ನೋದೆ ಚರ್ಚೆ. ಇದು 80% ಸರ್ಕಾರ. ತಾಕತ್ತಿದ್ದರೆ ಆರ್‌ಎಸ್‌ಎಸ್ ನಿಷೇಧ ಮಾಡಿ ಚುನಾವಣೆಗೆ ಬನ್ನಿ. ದೇಶಭಕ್ತ ಸಂಘಟನೆಯಾಗಿ ಆರ್‌ಎಸ್‌ಎಸ್ ವಿಶ್ವದ ಜನರ ಮನಸ್ಸು ಗೆದ್ದಿದೆ. ದೇಶಕ್ಕೆ ತನ್ನದೇ ಕೊಡುಗೆ ನೀಡಿದೆ ಎಂದು ತಿಳಿಸಿದರು.