ಬೆಂಗಳೂರು : ತಂದೆ ಪೋಸ್ಟ್ ಮಾಸ್ಟರ್, ತಾಯಿ ಅಂಗನವಾಡಿ ಕಾರ್ಯಕರ್ತೆ. ನಾನು ಬಡ ಕುಟುಂಬದಿಂದ ಬಂದವನು. ಜೀವನದಲ್ಲಿ ನಿಖರ ಗುರಿ, ಕಠಿಣ ಪರಿಶ್ರಮ, ಶಿಸ್ತು, ಸಚ್ಚಾರಿತ್ರ್ಯ ಇದ್ದಲ್ಲಿ ಯಾವುದೇ ಪರೀಕ್ಷೆಯಲ್ಲಾದರೂ ಯಶಸ್ವಿಯಾಗಿ ಉತ್ತೀರ್ಣರಾಗಬಹುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡ್ಲ್ಯೂಎಸ್ ಎಸ್ ಬಿ) ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿರುವ ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಆರಂಭಿಸಿರುವ “ಅಸ್ಪೈರ್ ವಿತ್ ರಾಮ್ ಐಎಎಸ್” ಎಂಬ ಉಪನ್ಯಾಸಕ ಮಾಲಿಕೆಯ ಭಾಗವಾಗಿ ವಿಜಯನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜೀವನದಲ್ಲಿ ಕುಟುಂಬ ಸಮಸ್ಯೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ನಮ್ಮಲ್ಲಿರುವ ನಮ್ಮ ಶಕ್ತಿಯನ್ನು ನಾವೇ ಎಚ್ಚರಗೊಳಿಸಿಕೊಳ್ಳಬೇಕು. ಸಮಾಜಕ್ಕೆ ಯಾವುದೇ ಸೋಲುಗಳು ಬೇಕಿಲ್ಲ. ಬೇಕಿರುವುದು ಗೆಲುವು ಅಷ್ಟೇ. ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದಲೇ ನಿಮ್ಮ ವ್ಯಾಸಂಗ ಮುಂದುವರಿಸಿ ಎಂದು ಅತ್ಮವಿಶ್ವಾಸ ತುಂಬಿದರು.
ನಮ್ಮ ತಂದೆಗೆ ಬರುತ್ತಿದ್ದ ವೇತನದಲ್ಲಿ ನಮ್ಮ ಕುಟುಂಬ ನಡೆಸುವುದು ಕಷ್ಟವಾಗಿತ್ತು. ಈ ವೇಳೆ ನನಗೆ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಸಿಕ್ಕಿದರೂ ನಾನು ಓದಲು ಸಾಧ್ಯವಾಗಿಲ್ಲ. ಕೊನೆಯದಾಗಿ ಸರಕಾರಿ ಕಾಲೇಜಿನಲ್ಲಿ ಪಶುವೈದ್ಯಕೀಯ ಪದವಿ ಮುಗಿಸಿದೆ. ನನಗೆ ವಿಜ್ಞಾನಿಯಾಗಬೇಕೆಂಬ ಬಯಕೆ ಇತ್ತು. ಇದಕ್ಕಾಗಿ ಕೆಲವು ಯೋಜನೆ ರೂಪಿಸಿದ್ದೆ. ಅದನ್ನು ಒಪ್ಪಿ ಕೇಂದ್ರ ಸರಕಾರ ಶಿಷ್ಯವೇತನ ನೀಡಲು ಮುಂದಾಗಿತ್ತು. ಇದುವೇ ನನ್ನ ಜೀವನದ ಆಧಾರಸ್ತಂಭವಾಗಿತ್ತು. ಮುಷ್ಕರದಿಂದಾಗಿ ಕಾಲೇಜು ಸ್ಥಗಿತಗೊಂಡ ಕಾರಣದಿಂದ ಶಿಷ್ಯವೇತನ ಕೈತಪ್ಪಿ ಹೋಯಿತು. ಆ ವೇಳೆ ನಾನು ಆತ್ಮವಿಶ್ವಾಸ ಕಳೆದುಕೊಂಡೆ. ಎಷ್ಟೋ ದಿನ ಕಣ್ಣೀರಿನಲ್ಲೇ ಕಳೆದೆ. ನನ್ನ ಸ್ನೇಹಿತನ ಪ್ರೋತ್ಸಾಹಧಾಯಕ ಮಾತುಗಳಿಂದ ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆ ಆರಂಭಿಸಿ ಇಂದು ನಿಮ್ಮ ಮುಂದೆ ನಿಂತಿದ್ದೇನೆ ಎಂದರು.
ಕಷ್ಟಗಳು ನಮ್ಮ ಜೀವನವನ್ನು ಬುಡಮೇಲು ಮಾಡುತ್ತವೆ. ಆದರೆ, ನಮ್ಮ ಛಲ ಬಿಡಬಾರದು. ನಾನು 300 ರೂ. ದಿನಗೂಲಿಗಾಗಿ ಪಶುವೈದ್ಯಕೀಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೇ ಧೈರ್ಯದಿಂದ ಮುನ್ನುಗಿದ್ದರೆ, ಯಶಸ್ವು ಕಟ್ಟಿಟ್ಟ ಬುತ್ತಿ.
ದುಶ್ಚಟಗಳಿಂದ ದೂರವಿರಿ. ಇದು ನಿಮ್ಮನ್ನು ವಿನಾಶಕ್ಕೆ ಕರೆದೊಯ್ಯಲಿದೆ. ಒಳ್ಳೆಯ ಪುಸ್ತಕಗಳನ್ನು ಓದಿ. ಒಳ್ಳೆಯ ಆರೋಗ್ಯ ಕಾಯ್ದುಕೊಳ್ಳಿ. ಉತ್ತಮ ಸಂವಹನ ಕೌಶಲ್ಯ ರೂಢಿಸಿಕೊಳ್ಳಿ ಎಂದು ತಿಳಿಸಿದರು.
ಏನೇನು ಓದಬೇಕು
ಸ್ಪರ್ಧಾತ್ಮಕ ಪರೀಕ್ಷೆಗೆ ಏನನ್ನು ಓದಬೇಕು ಎಂಬುದನ್ನು ವಿದ್ಯಾರ್ಥಿಗಳು ಮೊದಲು ಅರಿತುಕೊಳ್ಳಬೇಕು. ಸುಖಾ ಸುಮ್ಮನೆ ಎಲ್ಲವನ್ನು ಆಳವಾಗಿ ಓದುವುದರಿಂದ ಪ್ರಯೋಜನವಿಲ್ಲ. ದಿನಪತ್ರಿಕೆಗಳು, ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಚೆನ್ನಾಗಿ ಓದಬೇಕು. ಇದರ ಜತೆಗೆ ಬರವಣಿಗೆಯ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ
ನನ್ನಂತೆ ಬಹಳಷ್ಟು ಬಡ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ, ಕೆಪಿಎಸ್ಸಿ ಹಾಗೂ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವು ಕಾಣಬೇಕೆಂಬ ಬಯಕೆ ಇದೆ. ಆದರೆ, ಆರ್ಥಿಕ ಪರಿಸ್ಥಿತಿ ಇದಕ್ಕೆ ಸಹಾಯ ಮಾಡದೇ ಇರುಬಹುದು. ಇದಕ್ಕಾಗಿ ನಾನು ಈ ಕಾರ್ಯಕ್ರಮ ಆರಂಭಿಸಿದ್ದೇನೆ. ಇದರಲ್ಲಿ ಉಚಿತವಾಗಿ ಮಾರ್ಗದರ್ಶನ ಸಿಗಲಿದೆ. ನನ್ನ ಪ್ರಕಾರ ತರಬೇತಿಗಿಂತ ಮಾರ್ಗದರ್ಶನ ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಾ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೋಶದ ಸಮನ್ವಯಾಧಿಕಾರಿ ಡಾ.ಎನ್.ಶೋಭಾ ರಾಣಿ ಇತರರು ಇದ್ದರು.
GOOD NEWS: ರಾಜ್ಯದಲ್ಲಿ ‘ಭೂ ಪರಿವರ್ತನೆ ನಿಯಮ’ ಸರಳೀಕರಣ: 2 ಎಕರೆಗಿನ ಸಣ್ಣ ಕೈಗಾರಿಕೆಗಳಿಗೆ ‘ಕನ್ವರ್ಷನ್’ ಬೇಕಿಲ್ಲ








