ಬೆಂಗಳೂರು: ನ್ಯಾಯಮೂರ್ತಿಗಳು ಶೇ 63 ಭ್ರಷ್ಟಾಚಾರದ ವಿಚಾರ ಪ್ರಕಟಿಸಿ, ರಾಜ್ಯ ಸರಕಾರದ ಮುಖಕ್ಕೆ ಮಂಗಳಾರತಿ ಎತ್ತಿದ್ದು, ನಿಮಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ವಿರುದ್ಧ ಶೇ 40 ಕಮಿಷನ್ ಎಂದು ವಿಶೇಷ ತನಿಖಾ ದಳ (ಎಸ್‍ಐಟಿ) ಮಾಡಿದ್ದೀರಲ್ಲವೇ? ಈಗ ಶೇ 63 ಭ್ರಷ್ಟಾಚಾರ ಸಂಬಂಧ ಯಾವ ಎಸ್‍ಐಟಿ ಮಾಡುತ್ತೀರಿ ಎಂದು ಪ್ರಶ್ನಿಸಿದರು. ನಿಮಗೆ ಧೈರ್ಯ ಇದ್ದರೆ ಸಿಬಿಐ ತನಿಖೆ ಮಾಡಿ ಎಂದು ಅವರು ಒತ್ತಾಯಿಸಿದರು. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಭ್ರಷ್ಟಾಚಾರ ಇದೆ ಎಂಬುದು ಜಗಜ್ಜಾಹೀರಾಗಲಿ ಎಂದು ನುಡಿದರು.
ಬೋವಿ ನಿಗಮದ ಅಧ್ಯಕ್ಷರೇ ಎಕರೆಗೆ 25 ಲಕ್ಷ ಕಮಿಷನ್ ಪಡೆಯುತ್ತಿದ್ದರು. ವಾಲ್ಮೀಕಿ ನಿಗಮದಡಿ 187 ಕೋಟಿ ಸುಮಾರು 700 ಖಾತೆಗೆ ವರ್ಗಾಯಿಸಲಾಗಿತ್ತು. ಅದನ್ನು ಬಳ್ಳಾರಿ ಚುನಾವಣೆಗೆ ಬಳಸಿದ್ದು, ತನಿಖೆ ನಡೆಯುತ್ತಿದೆ. ಸಚಿವರ ರಾಜೀನಾಮೆಯೂ ಆಗಿದೆ. ಮುಡಾ ಹಗರಣದಲ್ಲಿ 14 ನಿವೇಶನ ಲೂಟಿ ಹೊಡೆದು ಅದನ್ನು ವಾಪಸ್ ಕೊಟ್ಟಿದ್ದೀರಿ ಎಂದು ತಿಳಿಸಿದರು.
ಬಾರ್ ಲೈಸನ್ಸ್‍ಗೆ 20 ಲಕ್ಷ ಎಂಬುದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಟ್ರಾನ್ಸ್‍ಫಾರ್ಮರ್‍ನಲ್ಲಿ 90 ಕೋಟಿ ಹಗರಣ ನಡೆಯುತ್ತಿದೆ. 98 ಲಕ್ಷದ ಕಸದ ಯಂತ್ರಕ್ಕೆ 2.5 ಕೋಟಿ ಕೊಟ್ಟು ಬಾಡಿಗೆಗೆ ಪಡೆಯುತ್ತಿದ್ದಾರೆ. ಇದು ಸ್ವಂತಕ್ಕಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಮನೆದೇವರೇ ಭ್ರಷ್ಟಾಚಾರ..
ಕರ್ನಾಟಕವು ಹೈಕಮಾಂಡಿನ ಎಟಿಎಂ ಆಗಿದೆ. ಸೋನಿಯಾ, ರಾಹುಲ್ ಗಾಂಧಿಯವರಿಗೆ ದುಡ್ಡು ಕೊಡುವವರಿಗಷ್ಟೇ ಇಲ್ಲಿ ಅಧಿಕಾರ ಎಂದು ಆರ್. ಅಶೋಕ್ ಅವರು ಆರೋಪಿಸಿದರು.
ಯಾರು ಜಾಸ್ತಿ ಕೊಡುತ್ತಾರೋ ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಮೊನ್ನೆ ಬಿಹಾರ ಚುನಾವಣೆಗೆ ಕರ್ನಾಟಕದಿಂದ ಸುಮಾರು 300 ಕೋಟಿ ಹಣ ಹೋಗಿದೆ. ಎಲ್ಲ ಸಚಿವರ ಬ್ರೇಕ್ ಫಾಸ್ಟ್ ಸಭೆ ನಡೆಸಿ 300 ಕೋಟಿ ಸಂಗ್ರಹಿಸಿ ಕೊಟ್ಟಿದ್ದಾರೆ. ಶಾಸಕ ಪಪ್ಪಿ 50 ಕೆಜಿ ಚಿನ್ನ ಇಟ್ಟಿದ್ದರು.್ಲವರು ಇನ್ನೂ ಜೈಲಲ್ಲೇ ಇದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ ಮನೆದೇವರೇ ಭ್ರಷ್ಟಾಚಾರ ಎಂದು ಟೀಕಿಸಿದರು.
ಮುಡಾ 3 ಸಾವಿರ ಕೋಟಿ ಹಗರಣ ಆದಾಗ, ವಾಲ್ಮೀಕಿ ನಿಗಮದ ಹಗರಣ ನಡೆದಾಗ ನಾವು ದೊಡ್ಡ ಹೋರಾಟವನ್ನು ಮಾಡಿದ್ದೆವು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪದೇಪದೇ ಭ್ರಷ್ಟಾಚಾರಕ್ಕೆ ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದರು. ಈ ಸರಕಾರ ಶೇ 63ರಷ್ಟು ಭ್ರಷ್ಟಾಚಾರ ಮಾಡುವ ಅಲಿಬಾಬಾ ಮತ್ತು 34 ಜನ ಕಳ್ಳರ ಸರಕಾರ ಎಂದು ಹಾಲಿ ಉಪ ಲೋಕಾಯುಕ್ತರೇ ಹೇಳಿದ್ದಾರೆ ಎಂದು ಗಮನ ಸೆಳೆದರು.
ಇದು ಶೇ 60ರಷ್ಟು ಭ್ರಷ್ಟಾಚಾರದ ಸರಕಾರ ಎಂದು ಬಿಜೆಪಿ ಹೇಳಿತ್ತು. ಈ ಸರಕಾರವೇ ನೇಮಿಸಿದ ಉಪ ಲೋಕಾಯುಕ್ತ ನ್ಯಾಯಾಧೀಶರು ಇದನ್ನು ಹೇಳಿದ್ದಾರೆ. ವೇದಿಕೆಯಲ್ಲಿ ಎಲ್ಲರೂ ನ್ಯಾಯಮೂರ್ತಿಗಳು, ನ್ಯಾಯವಾದಿಗಳು ಕೂತಿದ್ದರು; ಕಮಿಷನ್ ಕೊಡದೇ ಇಲ್ಲೇನೂ ನಡೆಯುವುದಿಲ್ಲ; ಕರ್ನಾಟಕ ಭ್ರಷ್ಟಾಚಾರದಲ್ಲಿ 5ನೇ ಸ್ಥಾನದಲ್ಲಿದೆ ಎಂದಿದ್ದಾಗಿ ತಿಳಿಸಿದರು.
ಭ್ರಷ್ಟಾಚಾರದ ತಾಂಡವ ನೃತ್ಯ..
ಹಿಂದೆ ಪೇ ಸಿಎಂ ಎಂದು ರಸ್ತೆಗಳಲ್ಲಿ ಪೋಸ್ಟರ್ ಅಂಟಿಸಿದ್ದರು. ಈಗ ನಿಮ್ಮ ಮುಖದ ಮೇಲೆ ಪೋಸ್ಟರ್ ಅಂಟಿಸುವಂತಾಗಿದೆ ಎಂದು ಆಕ್ಷೇಪಿಸಿದರು. ಶೇ 63 ಕಮಿಷನ್ ಎಂಬುದನ್ನು ಗಮನಿಸಿ ಸಿದ್ದರಾಮಯ್ಯ, ಅವರ ಸಚಿವಸಂಪುಟಕ್ಕೆ ನಾಚಿಕೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರದ ತಾಂಡವ ನೃತ್ಯವನ್ನು ಅವರು ಮುಂದಿಟ್ಟಿದ್ದಾರೆ ಎಂದು ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ವಕ್ತಾರ ಪ್ರಕಾಶ್ ಅವರು ಹಾಜರಿದ್ದರು.
BREAKING: ರಾಜ್ಯದ ಮೆಕ್ಕೆ ಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: ಕುಕ್ಕುಟ ಆಹಾರ ಉತ್ಪಾದಕರು ಖರೀದಿಸಲು ಸರ್ಕಾರ ಅನುಮತಿ
ಸೆ.13ರಂದು ಮಹಿಳಾ ನೌಕರರ ದಿನಾಚರಣೆ ಘೋಷಣೆ: ಸಿಎಂ ಸಿದ್ದರಾಮಯ್ಯ ಭರವಸೆ








