ಹಾವೇರಿ : ವಿಕಸಿತ ಭಾರತ ಕನಸು ನನಸಾಗಬೇಕಾದರೆ ಚಾರಿತ್ರ್ಯವಂತ, ಬುದ್ಧಿವಂತ ಮಕ್ಕಳನ್ನು ನಾವು ಸೃಷ್ಠಿ ಮಾಡಿದರೆ ಈ ದೇಶಕ್ಕೆ ಉಜ್ವಲ ಭವಿಷ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ನಂಬಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರ ಗ್ರಾಮದಲ್ಲಿ ಬಳ್ಳಾರಿ ರುದ್ರಪ್ಪ ಶಿಕ್ಷಣ ಸಂಸ್ಥೆಯ 15 ನೇಯ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೊಟೆಬೆನ್ನೂರಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದವರು ಬಳ್ಳಾರಿ ಸಹೋದರರು, ಕೃಷಿ ಮಾಡಿಕೊಂಡು ಬೆವರು ಸುರಿಸಿ ದುಡಿದು ಸಮಾಜದಲ್ಲಿ ಕಷ್ಟ ಪಟ್ಟು ಮುಂದೆ ಬಂದವರು. ಅವರು ಹಾಕಿಕೊಂಡಿರುವ ಮಾರ್ಗದರ್ಶನದಿಂದ ಮುಂದೆ ಬಂದಿರುವ ಪೀಳಿಗೆ ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಕಾರಣದಿಂದ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಶಿಕ್ಷಣ ನೀಡಲು ಬಹಳಷ್ಟು ಶ್ರಮ ವಹಿಸಿ ಸಂಸ್ಥೆಗಳನ್ನು ಕಟ್ಟಿ ಯಶಸ್ವಿಯಾಗಿದ್ದಾರೆ. ಅವರಿಗೆ ಎಲ್ಲರ ಪರವಾಗಿ ಅಭಿನಂದನೆಗಳು. ಈ ಶಿಕ್ಷಣ ಸಂಸ್ಥೆಗಳು ಇರದಿದ್ದರೆ ಇಲ್ಲಿಯ ಮಕ್ಕಳು ಎಲ್ಲಿ ಹೋಗಬೇಕಿತ್ತು. ಇಲ್ಲಿ ಶಿಕ್ಷಣ ಸಂಸ್ಥೆ ಇರುವುದರಿಂದ ಬಹಳಷ್ಟು ತಂದೆ ತಾಯಂದಿರು ಶಿಕ್ಷಣ ಕಲಿಸಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.
ಒಂದು ಕಾಲದಲ್ಲಿ ಯಾರ ಬಳಿ ಭೂಮಿ ಇತ್ತೊ ಅವರು ಜಗತ್ತನ್ನು ಆಳುತ್ತಿದ್ದರು. ನಂತರ ಯಾರ ಬಳಿ ಬಂಡವಾಳ ಇತ್ತೊ ಅವರು ಜಗತ್ತು ಆಳಿದರು. ಈಗ ಜ್ಞಾನ ಇರುವವರ ಕಾಲ, ಹೊರದೇಶದಿಂದ ಪ್ರಧಾನಿಗಳು ಈಗ ಮೊದಲು ಬೆಂಗಳೂರಿಗೆ ಬರುತ್ತಾರೆ ಏಕೆಂದರೆ ಅಲ್ಲಿ ಇನ್ನೊಸಿಸ್, ವಿಪ್ರೊ ಸಂಸ್ಥೆಗಳಿವೆ. ಪ್ರತಿ ದಿನ ಸುಮಾರು ಐದು ಸಾವಿರ ವಿಜ್ಞಾನಿಗಳು ಬರುತ್ತಾರೆ. ಸುಮಾರು ಐದುನೂರು ಆರ್ ಆಂಡ್ ಡಿ ಸಂಸ್ಥೆಗಳಲ್ಲಿ ಬೆಂಗಳೂರಿನಲ್ಲಿ ಸುಮಾರು ನಾಲ್ಕುನೂರು ಸಂಸ್ಥೆಗಳಿವೆ. ಶಿಕ್ಷಣ ಒಬ್ಬ ವ್ಯಕ್ತಿಯ ಚರಿತ್ರೆ ಸೃಷ್ಟಿಸಲು ಭದ್ರ ಬುನಾದಿ ಹಾಕುತ್ತದೆ. ಸರಿ ತಪ್ಪು ಯಾವುದು ಎನ್ನುವ ಜ್ಞಾನವನ್ನು ಶಿಕ್ಷಣ ಹೇಳುತ್ತದೆ. ಜ್ಞಾನ ಮತ್ತು ಧ್ಯಾನ ಎರಡೂ ಮುಖ್ಯ. ಧ್ಯಾನ ಮಾಡುವ ಮೂಲಕ ನಿಮ್ಮ ಮನಸ್ಸಿನ ಮೇಲೆ ನೀವು ನಿಯಂತಣ ಮಾಡಬಹುದು. ಮತ್ತು ಯಾವ ವಿಚಾರದಲ್ಲಿ ನೀವು ಚಿಂತನೆ ಮಾಡುತ್ತೀರಿ ನೂರಕ್ಕೆ ನೂರು ಏಕಾಗ್ರತೆಯಿಂದ ಆ ಕೆಲಸ ಮಾಡಬಹುದು. ಆದ್ದರಿಂದ ಮಕ್ಕಳಿಗೆ ಧ್ಯಾನವೂ ಅಷ್ಟೇ ಮುಖ್ಯ ಎಂದು ಹೇಳಿದರು.
ಈ ದೇಶಕ್ಕೆ ಚರಿತ್ರೆ ಇದೆ. ಚಾರಿತ್ರ್ಯ ಬೇಕಿದೆ. ಬಳ್ಳಾರಿ ಬಂಧುಗಳು ಚಾರಿತ್ರ್ಯ ಕಲಿಸುವ ಕೆಲಸ ಮಾಡಬೇಕು. ಪ್ರಧಾನಿ ಮೋದಿ ಕನಸು, ವಿಕಸಿತ ಭಾರತ ಕನಸು ನನಸಾಗಬೇಕಾದರೆ ಚಾರಿತ್ರ್ಯವಂತ, ಬುದ್ಧಿವಂತ ಮಕ್ಕಳನ್ನು ನಾವು ಸೃಷ್ಟಿ ಮಾಡಿದರೆ ಈ ದೇಶಕ್ಕೆ ಉಜ್ವಲ ಭವಿಷ್ಯ ಇದೆ ಅಂತ ಪಧಾನಿ ನಂಬಿದ್ದಾರೆ. ಅದಕ್ಕಾಗಿ ಹೊಸ ಶಿಕ್ಷಣ ನೀತಿ ತಂದಿದ್ದಾರೆ. ಅದನ್ನು ಅಳವಡಿಸಿಕೊಳ್ಳುವ ಕೆಲಸವನ್ನು ತಾವು ಮಾಡಬೇಕು. ಮಕ್ಕಳಿಗೆ ಯಾವುದಾದರೂ ವಿಚಾರ ಹೇಳಿದರೆ ತರ್ಕಬದ್ಧವಾದ ಚಿಂತನೆ ಮಾಡಬೇಕು. ಯಾಕೆ, ಏನು, ಎಲ್ಲಿ ಎಂಬ ಪಶ್ನೆ ಮೂಡಬೇಕು. ಆಗ ಗಿಳಿ ಪಾಠ ಮಾಡುವ ಪರಿಸ್ಥಿತಿ ಬರುವುದಿಲ್ಲ. ಒಮ್ಮೆ ವಿದ್ಯಾರ್ಥಿಯಾದರೆ ಕೊನೆ ಉಸಿರಿರುವರೆಗೂ ವಿದ್ಯಾರ್ಥಿಗಳು, ಶಾಲೆಯಲ್ಲಿ ಮೊದಲು ಪಾಠ ಹೇಳುತ್ತಾರೆ. ಆಮೇಲೆ ಪರೀಕ್ಷೆ, ಜೀವನದಲ್ಲಿ ಪ್ರತಿದಿನ ಪರೀಕ್ಷೆ ಆ ಮೇಲೆ ಪಾಠ ಕಲಿಯುವುದು. ಹೀಗಾಗಿ ಯಾರು ನಿರಂತರವಾಗಿ ಕಲಿಯುತ್ತಾರೆ ಅವರು ಜೀವಂತವಾಗಿರುತ್ತಾರೆ. ಕಲಿಯುವುದನ್ನು ನಿಲ್ಲಿಸಿದರೆ ಇದ್ದೂ ಇಲ್ಲದಂತೆ, ಸಾಧನೆ ಇಡಿ ಮನುಕುಲಕ್ಕೆ ಅನುಕೂಲವಾಗುವಂತೆ ಮಾಡಬೇಕು. ನೀವು ಇಲ್ಲದಿದ್ದರೂ ನಿಮ್ಮ ಹೆಸರು ಉಳಿಯುವಂತ ಸಾಧನೆ ಮಾಡಬೇಕು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ ಸಾಧಕರಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ ಅಂತ ಹೇಳಿದ್ದಾರೆ ಎಂದರು.
ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅದನ್ನು ಏರಲು ಬಹಳ ಜನ ಪ್ರಯತ್ನ ಮಾಡಿದ್ದರು. ಅದನ್ನು ಮೊದಲ ಬಾರಿಗೆ ಥೇನ್ ಸಿಂಗ್ ಹತ್ತಿ ಭಾರತದ ಧ್ವಜವನ್ನು ನೆಟ್ಟ, ಅವನ ತಾಯಿ ಪ್ರತಿ ದಿನ ಅವನಿಗೆ ಇದನ್ನು ಹತ್ತುತೀಯಾ ಎಂದು ಕೇಳುತ್ತಿದ್ದಳು. ಇವನು ತನ್ನ ನಲವತ್ತೆರಡನೇ ವಯಸಿನಲ್ಲಿ ಯಶಸ್ವಿಯಾಗಿ ಹತ್ತಿ ಭಾರತದ ಧ್ವಜ ನಟ. ಅವನು ವಾಪಸ್ ಬಂದಾಗ ಪತಕರ್ತರು ನಲವತ್ತೆರಡನೇ ವಯಸ್ಸಿನಲ್ಲಿ ಹತ್ತಿದ್ದೀರಾ ಹೇಗನಿಸುತ್ತಿದೆ ಅಂತ ಕೇಳಿದರು. ಆಗ ಆತ ನಾನು ಹತ್ತನೇ ವಯಸಿನಲ್ಲಿಯೇ ಇದನ್ನು ಹತ್ತಲು ತೀರ್ಮಾನ ಮಾಡಿದ್ದೆ ಎಂದು ಹೇಳಿದ. ಈ ಬಳ್ಳಾರಿಯವರ ಸಂಸ್ಥೆಯಲ್ಲಿ ಕಲಿಯುವಾಗ ನೀವು ಏನು ತೀರ್ಮಾನ ಮಾಡುತ್ತೀರಿ ಅದು ಆಗೇ ಆಗುತ್ತದೆ. ಏನಾಗಬೇಕೆಂಬ ಗುರಿ ಇರಬೇಕು. ಅದನ್ನು ಸಾಧೀಸುವ ಛಲ ಇರಬೇಕು. ಆಗೇ ತೀರುತ್ತೇನೆ ಎಂಬ ಕನಸಿರಬೇಕು. ನಿಮ್ಮ ದಾರಿ ಸ್ಪಷ್ಟವಾಗಿರಬೇಕು. ಈ ಸಂಸ್ಥೆಯಿಂದ ಹೊರಗೆ ಹೋಗಿ ಸಂಸ್ಥೆಗೆ, ಗುರುಗಳಿಗೆ ಒಳ್ಳೆಯ ಹೆಸರು ತೆಗೆದುಕೊಂಡು ಬನ್ನಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಮುಖಂಡರುಗಳಾದ ಎಸ್.ಆರ್ ಬಳ್ಳಾರಿ ಹಾಗೂ ಸಿ.ಆರ್ ಬಳ್ಳಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
KSDL, ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ: ಜನವರಿ.10, 12 ಬದಲಿಗೆ ಜ.18ಕ್ಕೆ ನೇಮಕಾತಿ ಪರೀಕ್ಷೆ
ಧೀರೂಭಾಯಿ ಅಂಬಾನಿ ಜಯಂತಿ: ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿವೇತನ ಫಲಿತಾಂಶ ಪ್ರಕಟ







