ಬೆಂಗಳೂರು : ಹಲವು ದಿನಗಳ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮತ್ತೆ ಗುಡುಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮಾತ್ರವಲ್ಲ, ಅಮೆರಿಕ ಅಧ್ಯಕ್ಷರಾಗಿಯೂ ಮುಂದುವರಿಯುತ್ತಾರೆ. ರಾಜ್ಯಾಧ್ಯಕ್ಷರಾಗಿ ಮುಂದುವರೆದರೆ ಹೊಸ ಪಕ್ಷ ಕಟ್ಟುತ್ತೇವೆ ಎಂದು ಯತ್ನಾಳ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಉಚ್ಚಾಟನೆ ವರಿಷ್ಠರಲ್ಲಿ ಪಶ್ಚಾತ್ತಾಪ ಮೂಡಿಸಿದೆ. ಇದು ದೊಡ್ಡ ಬ್ಲಿಂಡರ್ ನಿರ್ಧಾರ ಎಂದು ವರಿಷ್ಠರು ಅಭಿಪ್ರಾಯ ಪಟ್ಟಿರುವುದಾಗಿ ಕೇಂದ್ರದ ಸಚಿವರೊಬ್ಬರು ನನಗೆ ಹೇಳಿದ್ದಾರೆ. ನನ್ನ ಬಿಜೆಪಿ ಸೇರ್ಪಡೆಗೆ ಮೂರನೇ ಬಾರಿಗೆ ರಿಹರ್ಸಲ್ ನಡೆಯುತ್ತಿದೆ. ನಾನು ಇನ್ನೂ ಮೂರು ವರ್ಷ ಶಾಸಕನಾಗಿರುತ್ತೇನೆ. ಅಲ್ಲಿಯವರೆಗೂ ಕಾಯುತ್ತೇನೆ. ವಿಜಯೇಂದ್ರ ಮುಂದುವರಿದರೆ ಹೊಸ ಪಕ್ಷ ಕಟ್ಟುತ್ತೇವೆ ಎಂದು ಹೇಳಿದರು.
ಬಿಜೆಪಿಯಿಂದ ನಮ್ಮ ಪಕ್ಷಕ್ಕೆ ಹಲವರು ಬರುತ್ತಾರೆ. ಕಾಂಗ್ರೆಸ್, ಜೆಡಿಎಸ್ ನಿಂದಲೂ ಬರಲು ಸಿದ್ದರಿದ್ದಾರೆ. ನಾವು ಹಿಂದುತ್ವ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಹೊಸ ಪಕ್ಷ ಕಟ್ಟುತ್ತೇವೆ. ಸದ್ಯ ಬಿಜೆಪಿಯಲ್ಲಿ ಯಾವ ಹಿರಿಯ ನಾಯಕನೂ ವಿಜಯೇಂದ್ರ ಪರ ಇಲ್ಲ. ವಿಜಯೇಂದ್ರ ಪ್ರಾಮಾಣಿಕ ಕಾರ್ಯಕರ್ತರನ್ನು ದೂರ ಇಟ್ಟು ಸುಳ್ಳರ ಗುಂಪು ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದರು.