ಬೆಳಗಾವಿ : ಕನೇರಿಯ ಕಾಡಸಿದ್ದೇಶ್ವರ ಮಠದ ಅದೃಶಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ನಿರ್ಬಂಧ ವಿಧಿಸಿದ್ದನ್ನು ಖಂಡಿಸಿ ಇಂದು ಬೆಳಗಾವಿ ಹೊರ ವಲಯದ ಖಾಸಗಿ ಹೋಟೆಲ್ ನಲ್ಲಿ ಹಿಂದೂ ಮುಖಂಡರು ಮಹತ್ವದ ಸಭೆ ನಡೆಸಿದರು.
ರಾಜ್ಯಾಧ್ಯಂತ ಕನೇರಿ ಸ್ವಾಮೀಜಿಗಳ ಪರ ಹೋರಾಟಕ್ಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅದನ್ನೇ ದೊಡ್ಡ ಅಸ್ತ್ರವನ್ನಾಗಿ ಬಳಸಲು ಮುಂದಾಗಿರುವುದು ಈ ಸಭೆಯಿಂದ ಸ್ಪಷ್ಟವಾಗಿದೆ.
ಸಭೆಯಲ್ಲಿ ಕನೇರಿ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿ.ಸಿ. ಪಾಟೀಲ, ಶಶಿಕಲಾ ಜೊಲ್ಲೆ, ಅರವಿಂದ ಬೆಲ್ಲದ, ಅಭಯ ಪಾಟೀಲ, ಸಿ.ಟಿ. ರವಿ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಭಗವಂತ ಖೂಬಾ, ಪ್ರತಾಪ್ ಸಿಂಹ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.
ಸುಪ್ರೀಂ ಕೋರ್ಟ್ ತರಾಟೆ
ಇನ್ನು ಇದೆ ವಿಚಾರಕ್ಕೆ ಸಂಬಂಧಪಟ್ಟಂತೆ ಕನ್ನೇರಿ ಶ್ರೀಗಳು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಇದೀಗ ಸುಪ್ರೀಂ ಕೋರ್ಟ್ ವಜಾ ಗೊಳಿಸಿದೆ. ವಿಚಾರಣೆಯಲ್ಲಿ ಕನ್ನೆರಿ ಮಠದ ಸ್ವಾಮೀಜಿ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡಿದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಪೀಠದಿಂದ ಸ್ವಾಮೀಜಿಗೆ ತರಾಟೆ ತೆಗೆದುಕೊಂಡಿದ್ದು, ಪ್ರಚೋದನಕಾರಿ ಹೇಳಿಕೆ ನೀಡಿದ್ದ ಕನ್ನೇರಿ ಶ್ರೀಗಳ ನಡೆ ವಿರುದ್ಧ ಆಕ್ರೋಶ ಹೊರ ಹಾಕಿದರು.
ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ನೀವು ಒಳ್ಳೆಯ ಪ್ರಜೆಯಲ್ಲ. ಅವಹೇಳನಕಾರಿ ಭಾಷೆ ಬಳಸಿದ್ದೀರಿ. ವಾಕ್ ಸ್ವಾತಂತ್ರ್ಯ ವ್ಯಾಪ್ತಿಯಲ್ಲಿಲ್ಲ. ನೀವು ಮಾತನಾಡುವುದು ನಿಲ್ಲಿಸಿ ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ ಎಂದು ತರಾಟೆಗೆ ತೆಗೆದುಕೊಂಡಿತು.








