ತುಮಕೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಜಿಕ್ಯೂಷನ್ ಗೆ ಅನುಮತಿ ನೀಡಿರುವ ವಿಚಾರವಾಗಿ ವಿಪಕ್ಷ ನಾಯಕರು ಇದು ಪಾದಯಾತ್ರೆಗೆ ಸಿಕ್ಕ ಜಯ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿ ಸಂಸದ ವಿ.ಸೋಮಣ್ಣ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ ಎನ್ನುವ ಮೂಲಕ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತುಮಕೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಾಹೇಬ್ರು ನುರಿತ ರಾಜಕಾರಣಿ, ಬುದ್ಧಿವಂತರು. ನಾನು ಅವರು ಬಹಳ ಆತ್ಮೀಯರಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಿನ್ನೆ ಕೂಡ ಅವರ ಜೊತೆ ಮಾತನಾಡಿದ್ದೇನೆ. ಅವರು ಮಾತನಾಡಿದ್ದನ್ನ ನಾನು ಬಹಳ ಆನಂದದಿಂದ ಸ್ವೀಕರಿಸಿದ್ದೇನೆ. ಬಾಕಿದ್ದೇಲ್ಲಾ ಕಾನೂನು ನೋಡಿಕೊಳ್ಳುತ್ತೆ. ಕಾನೂನು ಏನು ಹೇಳುತ್ತೆ ಅದು ಆಗುತ್ತೆ.
ಸಿದ್ದರಾಮಯ್ಯನವರು ನುರಿತ ರಾಜಕಾರಣಿ. ಕೆಲವು ಸಂದರ್ಭದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಕೆಲಸ ಮಾಡುತ್ತೆ. ಒಂದಂತೂ ಸತ್ಯ ಕಾನೂನಿಗಿಂತ ಯಾರೂ ದೊಡ್ಡವರಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ದೂರದೃಷ್ಟಿಯ ಬ್ರಹ್ಮಾಸ್ತ್ರ ಏನಿದೆ ಅದರ ಪ್ರಕಾರ ಕಾನೂನು ಕೆಲಸ ಮಾಡುತ್ತದೆ. ಇಲ್ಲಿ ವ್ಯಕ್ತಿ ಪ್ರಭಾವ, ಅಧಿಕಾರ ಎಲ್ಲವೂ ಗೌಣ ಎಂದರು.
ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೋ ಇಲ್ವೋ ನನಗೆ ಗೊತ್ತಿಲ್ಲ. ಅವರ ರಾಜೀನಾಮೆ ಇತ್ಯಾದಿ ವಿಚಾರಗಳಲ್ಲಿ ನಾನು ರಾಜಕೀಯ, ಬೇರೆಯವರ ಬಗ್ಗೆ ಸಣ್ಣತನದ ಮಾತನಾಡುವುದಿಲ್ಲ.5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರ ಎಂಬ ಪ್ರಶ್ನೆಗೆ ಆ ರೀತಿಯಾಗಿ ಆದರೆ ನನಗಿಂತ ಜಾಸ್ತಿ ಆನಂದ ಪಡೋರು ಬೇರೆ ಯಾರೂ ಇಲ್ಲ ಎನ್ನುವ ಮೂಲಕ ಅಚ್ಚರಿಯ ಹೇಳಿಕೆ ನೀಡಿದರು.