ಬೆಂಗಳೂರು : ಈ ಬಾರಿ ದಸರಾವನ್ನು ಬಾನು ಮುಷ್ತಾಕ್ ಉದ್ಘಾಟಿಸಲಿದ್ದು, ಈ ವಿಚಾರವಾಗಿ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದವು. ಕಳೆದೆರಡು ದಿನಗಳ ಹಿಂದೆ ಇದೇ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳ ಆಸ್ತಿಯಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ವಿಚಾರವಾಗಿ ಮೈಸೂರು ಅರಮನೆಯ ರಾಜಮಾತೆ ಪ್ರಮೋದ ದೇವಿ ಒಡೆಯರ್ ಅವರು ಹಿಂದುಗಳ ಸ್ವತ್ತು ಅಲ್ಲ ಎನದಿದ್ದರೆ ಚಾಮುಂಡೇಶ್ವರಿ ದೇವಸ್ಥಾನ ಮುಜರಾಯಿ ಇಲಾಖೆಗೆ ಹೇಗೆ ಒಳಪಡುತ್ತದೆ ಎಂದು ಬೇಸರ ಹೊರಹಾಕಿದ್ದಾರೆ. ಇದೀಗ ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಹೀಗಾಗಿ ನಾನು ಮಾತನಾಡದಿರುವುದೇ ಉತ್ತಮ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸದನದಲ್ಲಿ ಸೇರಿದಂತೆ ಎಲ್ಲಿ ಏನೇ ಮಾತನಾಡಿದರೂ ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಬೇರೆಯವರ ಕೆಲಸವಾಗಿದೆ. ರಾಜಕೀಯದವರು, ಪ್ರಮೋದಾ ದೇವಿ ಅವರು, ಸಂಸದ ಯದುವೀರ್ ಅವರು, ವಿಧಾನಸಭೆಯಲ್ಲಿ ಹೀಗೆ ಎಲ್ಲರೂ ತಪ್ಪು ಹುಡುಕುವವರೇ. ಹೀಗಾಗಿ ನಾನು ಮಾತನಾಡದಿರುವುದೇ ಲೇಸು ಅನಿಸುತ್ತದೆ. ಈ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಬೇರೆ ನಾಯಕರು ಹಾಗೂ ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಮಾತನಾಡಿ ಎಂದು ಹೇಳಿದರು.