ಬೆಳಗಾವಿ : ವಕ್ಫ್ ವಿವಾದ ಹಿನ್ನೆಲೆಯಲ್ಲಿ ರೈತರಿಗೆ ನೀಡಿದ್ದ ನೋಟಿಸ್ ಗಳನ್ನು ಹಿಂಪಡೆದ ವಿಚಾರವಾಗಿ ಬೆಳಗಾವಿಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ನೋಟಿಸ್ಗಳನ್ನು ಹಿಂಪಡೆದಿದ್ದು ಶಾಶ್ವತವಲ್ಲ. ಆದರೆ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿಗೆ ಏನಾದರೂ ವಿರೋಧ ವ್ಯಕ್ತಪಡಿಸಿದರೆ ಕಾಂಗ್ರೆಸ್ ಸಂಸದರು ರಾಜ್ಯದಲ್ಲಿ ಓಡಾಡಲು ಕಠಿಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಹೋರಾಟದಿಂದ ವಕ್ಫ್ ನೋಟಿಸ್ ಹಿಂಪಡೆಯುತ್ತಿದ್ದಾರೆ. ಆದರೆ ಅದು ಶಾಶ್ವತ ಅಲ್ಲ. ಎಲ್ಲವನ್ನು ರದ್ದು ಮಾಡಬೇಕು. ಗೆಜೆಟ್ ನೋಟಿಫಿಕೇಶನ್ ಮಾಡಿದ್ದು ಎಲ್ಲಾ ರದ್ದುಪಡಿಸಬೇಕು. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿಯನ್ನು ತರುತ್ತಿದೆ. ಒಂದು ವೇಳೆ ಕಾಯ್ದೆಗೆ ವಿರೋಧಿಸಿದರೆ ರೈತರು ಧರಣಿ ಮಾಡುತ್ತಾರೆ.ಕರ್ನಾಟಕದ ಕಾಂಗ್ರೆಸ್ ಸಂಸದರ ಮನೆಯ ಮುಂದೆ ಧರಣಿ ಮಾಡುತ್ತಾರೆ ಎಂದು ಅವರು ತಿಳಿಸಿದರು.
ಅಕಸ್ಮಾತ್ ಬಿಲ್ ಗೆ ವಿರೋಧ ಮಾಡಿದರೆ, ಕೈ ಎಂಪಿಗಳು ಕರ್ನಾಟಕದಲ್ಲಿ ಓಡಾಡುವುದೇ ಕಠಿಣ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.ರೈತರ ಜಮೀನು, ಗುಡಿ ಗುಂಡಾರ ಮಠದ ಜಾಗ ಹೋಗುತ್ತಿವೆ. ನಮಾಜ್ ಮಾಡಲು ನಮ್ಮವರು ಸ್ಮಶಾನ ಭೂಮಿ ಕೊಟ್ಟರೆ, ಆ ಎಲ್ಲಾ ಭೂಮಿ ನಮ್ಮದು ಅನ್ನೋ ಸ್ಥಿತಿ ಬಂದಿದೆ. ಒಂದಿಂಚು ಭೂಮಿ ಮೇಲೆ ವಕ್ಫ್ ಅನ್ನೋದು ಇರಬಾರದು. ಕರ್ನಾಟಕದ ಕಾಂಗ್ರೆಸ್ ಸಂಸದರು ಕಾಯ್ದೆಯ ಪರ ಮತ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ತಿಳಿಸಿದರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಹೋರಾಟ ವಿಚಾರವಾಗಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಆಯಿತು. ಎಷ್ಟೋ ಸಲ ಸಿಎಂ ಸಿದ್ದರಾಮಯ್ಯ ಅವರು ಆಶ್ವಾಸನೆ ಕೊಟ್ಟರು. ಮೊದಲ ಸಭೆಯಲ್ಲಿ ಅವರು ನಕರಾತ್ಮಕವಾಗಿ ಮಾತನಾಡಿದರು. ಅದಕ್ಕೆ ನಮ್ಮ ಗುರುಗಳು ನಮ್ಮ ಮುಖಂಡರು ಸೇರಿಕೊಂಡು ಟ್ರ್ಯಾಕ್ಟರ್ ತಗೊಂಡು ಸದನ ನಡೆಯದಂತೆ ಪ್ರತಿಭಟನೆ ಮಾಡುತ್ತೇವೆ. ಬೆಳಗಾವಿಯಲ್ಲಿ ಸದನ ನಡೆದಂತೆ ಪ್ರತಿಭಟನೆ ಮಾಡುತ್ತೇವೆ. ಅಷ್ಟರಲ್ಲಿ ಮುಖ್ಯಮಂತ್ರಿ ಗುರುಗಳನ್ನು ಕರೆದು ಮಾತಾಡಬೇಕು ಮೀಸಲಾತಿ ಬಗ್ಗೆ ನಮ್ಮ ನಿಲುವು ಏನೆಂದು ಸ್ಪಷ್ಟಪಡಿಸಬೇಕು. ನೋಟಿಫಿಕೇಶನ್ ಮಾಡಿದರೆ ಡಿಸೆಂಬರ್ 9ರ ಹೋರಾಟ ಸ್ಥಗಿತ ಆಗುತ್ತದೆ.