ಮೈಸೂರು : ಸಾಹಿತಿ ಬಾನು ಮುಷ್ತಾಕ್ ಅವರು ಮುಸ್ಲಿಂ ಅಂತ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ವಿರೋಧ ಮಾಡುತ್ತಿಲ್ಲ. ಬದಲಾಗಿ 2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ತಾಯಿಯ ಬಗ್ಗೆ ಅವರು ಆಡಿದ ಮಾತಿಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳಿದಲ್ಲಿ ನಾನು ಹಾಕಿರುವ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಯನ್ನು ಹೈಕೋರ್ಟ್ನಲ್ಲಿ ಕಲಂ 26ರ ಅಡಿ ಕೇಸ್ ಹಾಕಿದ್ದೇನೆ. ಇದರಲ್ಲಿ ಹಿಂದೂ ಧಾರ್ಮಿಕ ಪೂಜಾ ವಿಧಿವಿಧಾನಗಳ ಕುರಿತು ಹಾಗೂ ಸಂಪ್ರದಾಯಗಳ ವಿರುದ್ಧ ಕಂಡು ಬಂದರೆ ಪ್ರಶ್ನೆ ಮಾಡಬಹುದು ಎಂದು ಕಲಂ 26ರಲ್ಲಿ ತಿಳಿಸಲಾಗಿದೆ.
ಹಾಗಾಗಿ ಅದರಂತೆ ಕೇಸ್ ಹಾಕಿದ್ದೇನೆ. 2023ರಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಬಾನು ಮುಷ್ತಾಕ್ ಮಾತನಾಡಿರುವುದಕ್ಕೆ ಕ್ಷಮೆ ಕೇಳಬೇಕು ಹಾಗೂ ದಸರಾ ಉದ್ಘಾಟನಾ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ಸ್ಪಷ್ಟನೆ ಕೊಡಬೇಕು. ಹಾಗಾದರೆ ಮಾತ್ರ ನಾನು ಹಾಕಿರುವ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಅವರು ಹೇಳಿದರು.