ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಂಡಿರುವ ಬೆನ್ನಲ್ಲೇ, ಇರಾನ್ನ ಪ್ರಮುಖ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ (Bushehr Nuclear Power Plant) ಆವರಣಕ್ಕೆ ಮಂಗಳವಾರ ರಾತ್ರಿ ಅಪರಿಚಿತ ಕ್ಷಿಪಣಿಯೊಂದು (Projectile) ಅಪ್ಪಳಿಸಿದೆ ಎಂದು ಇರಾನ್ ತಿಳಿಸಿದೆ. ಈ ಘಟನೆಯ ಬೆನ್ನಲ್ಲೇ ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯಾದ ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA), ಯಾವುದೇ ದೊಡ್ಡ ಅನಾಹುತ ಸಂಭವಿಸದಂತೆ ತಡೆಯಲು ಎಲ್ಲಾ ದೇಶಗಳು ‘ಗರಿಷ್ಠ ಸಂಯಮ’ ವಹಿಸಬೇಕು ಎಂದು ತುರ್ತು ಮನವಿ ಮಾಡಿದೆ.
ಇರಾನ್ನ ಪರಮಾಣು ಶಕ್ತಿ ಸಂಸ್ಥೆಯ ಪ್ರಕಾರ, ಕ್ಷಿಪಣಿಯು ಸ್ಥಾವರದ ಆವರಣದೊಳಗೆ ಬಿದ್ದಿದೆಯಾದರೂ, ಮುಖ್ಯ ರಿಯಾಕ್ಟರ್ಗೆ ಯಾವುದೇ ಹಾನಿಯಾಗಿಲ್ಲ. ಸಿಬ್ಬಂದಿಗಳೂ ಸುರಕ್ಷಿತವಾಗಿದ್ದು, ವಿದ್ಯುತ್ ಉತ್ಪಾದನೆ ಎಂದಿನಂತೆ ಮುಂದುವರಿದಿದೆ.
“ಪರಮಾಣು ಸ್ಥಾವರಗಳ ಮೇಲೆ ಅಥವಾ ಅವುಗಳ ಹತ್ತಿರ ದಾಳಿ ನಡೆಸುವುದು ಅತ್ಯಂತ ಅಪಾಯಕಾರಿ. ಇದು ಪರಮಾಣು ಸುರಕ್ಷತೆಯ ಏಳು ಪ್ರಮುಖ ನಿಯಮಗಳ ಉಲ್ಲಂಘನೆಯಾಗಿದೆ” ಎಂದು ಐಎಇಎ ಮುಖ್ಯಸ್ಥ ರಾಫೆಲ್ ಗ್ರೊಸ್ಸಿ ಎಚ್ಚರಿಸಿದ್ದಾರೆ.
ಇರಾನ್ ಈ ದಾಳಿಯ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದೆ. ಈ ಹಿಂದೆ ಮಾರ್ಚ್ 17 ರಂದು ಕೂಡ ಇದೇ ಸ್ಥಾವರದ ಹತ್ತಿರ ಇಂತಹದ್ದೇ ಘಟನೆ ನಡೆದಿತ್ತು ಎಂದು ಇರಾನ್ ನೆನಪಿಸಿದೆ.








