ಮೈಸೂರು : ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಮಗನ ಭೇಟಿಗಾಗಿ ನಾನು ಜೈಲಿಗೆ ಹೋಗುವುದಿಲ್ಲ ಎಂದು ಹಾಸನ ಜಿಲ್ಲೆಯ ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಮಗನನ್ನು ನೋಡಲು ಹೋಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಾಯಿಯಾಗಿ ಮಗನನ್ನು ನೋಡಲು ಹೋಗಿರುತ್ತಾರೆ. ಅವರು ಏನೇನು ಮಾತನಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಹಾಗೆಂದು ನಾನೀಗ ಪ್ರಜ್ವಲ್ ಭೇಟಿಯಾಗಲು ಹೋಗುವುದಿಲ್ಲ. ಒಂದು ವೇಳೆ ಹೋದರೆ, ‘ಅವನು ಏನೋ ಹೇಳಿಕೊಡಲು ಹೋಗಿದ್ದಾನೆ ಎನ್ನುತ್ತಾರೆ ಎಂದರು.
ನಮ್ಮ ಕುಟುಂಬದ ಮೇಲೆ ಹಾಕಿರುವ ಕೇಸ್ಗಳು ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಪ್ರಕರಣಗಳು ಕೋರ್ಟ್ನಲ್ಲಿ ಇರುವುದರಿಂದ ನಾನು ಮಾತಾಡಲ್ಲ. ನನಗೆ ದೇವರು, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ.ನಮಗೆ ಸದ್ಯದ ಮಟ್ಟಿಗೆ ದೇವರೇ ಗತಿ. ಬಿಟ್ಟರೆ ನ್ಯಾಯಾಂಗವೇ ಕಾಪಾಡಬೇಕು. ನನ್ನ ಮೇಲಿನ ಆರೋಪಗಳಿಂದ ಮುಕ್ತನಾಗಿ ಹೊರಬರುವೆ ಎಂದರು.