ಶಿವಮೊಗ್ಗ: ನಾನು ಸಾಗರ ತಾಲ್ಲೂಕಿಗೆ ಕೆಟ್ಟ ಹೆಸರು ತರುವ ವ್ಯವಸ್ಥೆಯನ್ನು ಸಹಿಸುವುದಿಲ್ಲ. ಕೆಲಸ ಮಾಡೋದಕ್ಕೆ ಆಗಲ್ಲ ಅಂದ್ರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂಬುದಾಗಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಂದು ಸಾಗರ ನಗರದ ಪ್ರವಾಸಿ ಮಂದಿರದಲ್ಲಿ ಮುಂಗಾರು ಪೂರ್ವವಾಗಿ ಪಿಡಿಓಗಳ ಜೊತೆಗೆ ಸಭೆ ನಡೆಸಿದರು. ಅಲ್ಲದೇ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಇನ್ನೇನು ಜೂನ್ ಸಮೀಪಿಸುತ್ತಿದೆ. ಶಾಲಾ-ಕಾಲೇಜು ಆರಂಭವಾಗುತ್ತಿವೆ. ಮಕ್ಕಳಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ತುರ್ತು ಅವಶ್ಯಕತೆ ಇರುತ್ತದೆ. ಅವರಿಗೆ ಸತಾಯಿಸಬೇಡಿ ಎಂಬುದಾಗಿ ಎಚ್ಚರಿಸಿದರು.
ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಜನರು ನನ್ನ ಮೇಲೆ ನಿರೀಕ್ಷೆಯಿಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ಆದರೇ ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕಾದದ್ದೂ ನನ್ನ ಜವಾಬ್ದಾರಿಯಾಗಿದೆ. ತಾಲ್ಲೂಕು ಕಚೇರಿಯ ವ್ಯವಸ್ಥೆ ಸರಿಯಾಗಿಲ್ಲ ಎನ್ನುವ ಬಗ್ಗೆ ಸಾರ್ವಜನಿಕರಿಂದ ಪದೇ ಪದೇ ದೂರು ಕೇಳಿ ಬರುತ್ತಿದೆ. ಸರ್ಕಾರಿ ಸೇವೆಯಲ್ಲಿ ವ್ಯವಸ್ಥಿತವಾಗಿ ತೊಡಗಿಸಿಕೊಳ್ಳಿ ಎಂದರು.
ಸಾಗರ ತಾಲ್ಲೂಕಿನಲ್ಲಿ ಭೂಮಿ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿವೆ. ನೆಲ ನುಂಗುವ ತಂಡವೇ ಇದೆ. ಅದಕ್ಕೆ ಮಟ್ಟ ಹಾಕಲು ಕೆಲಸವಾಗಬೇಕು. ತಾಲ್ಲೂಕು ಆಡಳಿತ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಕೆಲವರು ತಮ್ಮ ಬಳಿ ಆರು ಎಕರೆ ಜಮೀನುಗಳಿದ್ದರೂ ಬಗರ್ ಹುಕುಂನಲ್ಲಿ ಕೂಡ ಭೂಮಿ ಮಂಜೂರು ಮಾಡಿಸಿಕೊಂಡ ಪ್ರಕರಣಗಳು ಕಂಡು ಬಂದಿವೆ. ಅಂತವುಗಳನ್ನು ಪತ್ತೆ ಹಚ್ಚಿ, ಅಂತಹ ಮಂಜೂರಾತಿಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಸಾಗರ, ಹೊಸನಗರ ತಾಲ್ಲೂಕಿನಲ್ಲಿ ಸರ್ಕಾರಿ ಉಪಯೋಗಕ್ಕೆ ಭೂಮಿಯೇ ಇಲ್ಲದಂತೆ ಆಗುತ್ತಿದೆ. ಹೊಸನಗರ ತಾಲ್ಲೂಕಿನಲ್ಲಿ ಮೂರಾರ್ಜಿ ಶಾಲೆ ನಮಗೆ ಮಂಜೂರಾಗಿದೆ. ಆದರೆ ಅದನ್ನು ನಿರ್ಮಿಸಲು ಸರ್ಕಾರಿ ಭೂಮಿ ಸಿಗುತ್ತಿಲ್ಲ. ಮಂಜೂರಾದ 25 ಕೋಟಿ ಹಣ ವಾಪಾಸ್ಸೋಗುವ ಪರಿಸ್ಥಿತಿಯಿದೆ. ತಾಲ್ಲೂಕು ಕಚೇರಿಯಲ್ಲಿ ಯಾವುದೇ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿಯೂ ಸುದ್ದಿ ಪ್ರಕಟಗೊಂಡಿದೆ. ತಾಲ್ಲೂಕಿಗೆ ಕೆಟ್ಟ ಹೆಸರು ತರುವ ವ್ಯವಸ್ಥೆಯನ್ನು ನಾನು ಸಹಿಸುವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದರು.
94ಸಿ ಮತ್ತು 94ಸಿಸಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿವೆ. ಅವುಗಳನ್ನು ಕೂಡಲೇ ವಿಲೇವಾರಿ ಮಾಡಿ. ಭೂಮಿ ಕುರಿತ ಪ್ರಕರಣಗಳಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಬೇಕಾದ ಸ್ಥಳಗಳಲ್ಲಿ ಕೂಡಲೇ ಕ್ರಮ ಕೈಗೊಳ್ಳಿ ಎಂದರು.
ಇನ್ನೂ ಕಸಬಾ ಹೋಬಳಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತರ ದಾಖಲೆಗಳನ್ನು ಜನತೆಗೆ ನೀಡುವಲ್ಲಿ ಸತಾಯಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇಲ್ಲಿಯ ಕಂದಾಯ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಿಲ್ಲದೇ ಇದ್ದರೇ ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಿ ಎಂದು ಸಭೆಯಲ್ಲೇ ತಹಶೀಲ್ದಾರ ಚಂದ್ರಶೇಖರ್ ನಾಯಕ್ ಅವರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.
ಕಳೆದ ನಾಲ್ಕೈದು ದಿನಗಳಿಂದ ನಮ್ಮ ಕ್ಷೇತ್ರದಲ್ಲಿ ಸುರಿಯುತ್ತಿರುವ ಮಳೆಗೆ ಸಾಕಷ್ಟು ಹಾನಿಯಾಗಿದೆ. ಅವರಿಗೆ ತುರ್ತು ಪರಿಹಾರ ನೀಡುವಲ್ಲಿಯೂ ಕಂದಾಯ ಇಲಾಖೆಯು ತಕ್ಷಣ ವರದಿ ನೀಡಿ, ಮುಂದಾಗಬೇಕು. ಮಳೆ ಹಾನಿಯಿಂದ ಜಮೀನು, ಜಾನುವಾರು, ಮನೆ, ಏನೇ ಹಾನಿಯಾದರೂ ತಕ್ಷಣ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಾಗರ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಇಓ ಶಿವಪ್ರಸಾದ್, ಸರ್ವೆ ಅಧಿಕಾರಿ ವಿಶ್ವನಾಥ್ ಸೇರಿದಂತೆ ಇತರರರು ಉಪಸ್ಥಿತರಿದ್ದರು.
‘ಶಿಕ್ಷಣ ಸಚಿವ ಮಧು ಬಂಗಾರಪ್ಪ’ರಿಂದಲೇ ಸೊರಬದಲ್ಲಿ ‘ಇಸ್ಪೀಟ್ ಕ್ಲಬ್’: ಮಾಜಿ ಸಚಿವ ಹರತಾಳು ಹಾಲಪ್ಪ
GOOD NEWS: ರಾಜ್ಯದ ‘ಕ್ಯಾನ್ಸರ್ ರೋಗಿ’ಗಳಿಗೆ ಗುಡ್ ನ್ಯೂಸ್: 16 ಜಿಲ್ಲಾಸ್ಪತ್ರೆಗಳಲ್ಲಿ ‘ಕೀಮೋಥೆರಪಿ ಕೇಂದ್ರ’ ಆರಂಭ