ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಯಶಂಕರ್ ಅವರು ವಜಾಗೊಳಿಸಿ ಆದೇಶ ಹೊರಡಿಸಿದ್ದರು. ಇನ್ನು ಈ ಒಂದು ವಿಚಾರವಾಗಿ ಮೃತ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋರ್ಟ್ ತೀರ್ಪು ಏನು ಕೊಟ್ಟಿದೆಯೊ ಆ ಆದೇಶವನ್ನು ಸ್ವಾಗತ ಮಾಡುತ್ತೇವೆ ಎಂದು ರೇಣುಕಾ ಸ್ವಾಮಿ ತಂದೆ ಕಾಶಿನಾಥಯ್ಯ ಹೇಳಿಕೆ ನೀಡಿದರು. ಇನ್ನು ಎಸ್.ಪಿ.ಪಿ ಪ್ರಸನ್ನ ಕುಮಾರ್ ಅವರ ಕುರಿತಾಗಿ, ಮೊದಲಿಂದನೂ ಅವರು ನಮಗೆ ಧೈರ್ಯ ಹೇಳಿದ್ದಾರೆ. ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಅವರ ಬಗ್ಗೆ ಕೂಡ ನಮಗೆ ಗೌರವವಿದೆ ಹಾಗಾಗಿ ಅವರಿಗೆ ಕೂಡ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.
ಇನ್ನು ರೇಣುಕಾ ಸ್ವಾಮಿ ಚಿಕ್ಕಪ್ಪ ಮಾತನಾಡಿ, ನ್ಯಾಯಾಂಗದ ಮೇಲೆ ಹೆಚ್ಚಿನ ಭರವಸೆ ಉಂಟಾಗಿದೆ. ಸಾಮಾನ್ಯ ಜನರಿಗೂ ನ್ಯಾಯ ಸಿಗುತ್ತೇ ಎನ್ನುವ ಭರವಸೆ ಇದೆ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆ ಹಾಗೆ ಆಗುತ್ತೇ ಎನ್ನುವ ನಂಬಿಕೆ ಇದೆ. ಮುಂದಿನ ದಿನಗಳಲ್ಲಿಯೂ ಸಹ ಅದೇ ವಿಶ್ವಾಸ ನಮಗೆ ಇದೆ ಎಂದು ತಿಳಿಸಿದರು.
ಈಗಾಗಲೇ ನಮ್ಮ ಮಗ ತೀರಿಕೊಂಡಿದ್ದಾನೆ.ಅವನನ್ನು ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಅಗಲಿ ಎನ್ನುವುದರಲ್ಲಿ ನಾವು ಅವನನ್ನ ನೋಡುತ್ತೇವೆ. ಮುಂದಿನ ತಿಂಗಳು ರೇಣುಕಾ ಸ್ವಾಮಿಯ ಹೆಂಡತಿ ಸಹನಾಗೆ ಡೆಲಿವರಿ ಯಾಗುತ್ತದೆ. ಹಾಗಾಗಿ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಜೀವನಕ್ಕೆ ಏನಾದರೂ ಒಂದು ದಾರಿ ಮಾಡಿ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.