ದಾವಣಗೆರೆ : ಶ್ರೀ ಸಾಯಿ ಮಿನರಲ್ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನನ್ನ ವಿರುದ್ಧ ದೂರು ಕೊಟ್ಟಿರುವ ಹಿಂದೆ ಯಾರಿದ್ದಾರೆ ಎಂದು ನನಗೆ ತಿಳಿದಿದೆ. ನನ್ನ ಕೇಸ್ 2012 ರಿಂದ ಎಸ್‌ಐಟಿಯಲ್ಲಿ ನಡೆಯುತ್ತಿದೆ. ಹತ್ತು ವರ್ಷವಾದರೂ ಅದನ್ನ ಯಾಕೆ ಇನ್ನೂ ಜೀವಂತವಾಗಿ ಇಟ್ಟುಕೊಂಡಿದ್ದಾರೆ ಎಂದು ಅವರೇ ಹೇಳಬೇಕು. ತನಿಖೆ ನಡೆಯುತ್ತಿದೆ ಕೊರ್ಟ್ನಲ್ಲಿ ಉತ್ತರ ನೀಡುತ್ತೇನೆ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ತಿಳಿಸಿದರು.
ದಾವಣಗೆರೆಯಲ್ಲಿ ರಾಜ್ಯ ಸರ್ಕಾರ ಹಳೇ ಹುಬ್ಬಳ್ಳಿ ಪ್ರಕರಣ ಹಿಂಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ನಡೆದ ಹಲ್ಲೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಇಡಲು ಮುಂದಾಗಿದ್ದ ಗಲಭೆಕೋರರ ಪ್ರಕರಣವನ್ನು ಹಿಂಪಡೆಯಲು ನಿರ್ಧಾರ ಕೈಗೊಂಡಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಗಲಭೆಕೋರರ ರಕ್ಷಣೆಗೆ ಮುಂದಾಗಿದೆ. ಈ ಸರ್ಕಾರಕ್ಕೆ ಸಮಾಜ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುವುದು ಇಷ್ಟವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ ನಡೆದ ಹಿಂದಿನ ಹಲವು ಪ್ರಕರಣಗಳಲ್ಲಿನ ಕೇಸ್‌ಗಳನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಕೇಸ್‌ಗಳನ್ನು ವಾಪಾಸ್ ಪಡೆಯಬೇಕಾದರೆ ಅದನ್ನು ಪೂರ್ಣ ಪ್ರಮಾಣದಲ್ಲಿ ಪರಾಮರ್ಶಿಸಬೇಕು. ಇದನ್ನು ಬಿಟ್ಟು ಸರ್ಕಾರ ಏಕಾಏಕಿ ಕೇಸ್ ಹಿಂಪಡೆಯುವುದರ ಹಿಂದೆ ಮತಬ್ಯಾಂಕ್‌ನ ದುರುದ್ದೇಶ ಅಡಗಿದೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ ಎಂದು ದೂರಿದರು.