ರಾಮನಗರ : “ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಬಿಜೆಪಿಯವರು ಅದನ್ನು ದೇಶ ವಿಭಜನೆ ಎಂದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ” ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ರಾಮನಗರ ಜಿಲ್ಲೆ ಹಾರೋಹಳ್ಳಿಯಲ್ಲಿ ಮಂಗಳವಾರ ಅನ್ಯಪಕ್ಷಗಳ ನಾಯಕರ ಬೆಂಬಲ ಪಡೆದ ನಂತರ ಮಾಧ್ಯಮಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು.
“ಅವರು ಏನೇ ಹೇಳಿದರೂ ನಡೆಯುತ್ತದೆ ಎಂಬ ಧಾಟಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ನೀವು ನನ್ನನ್ನು ಪ್ರಶ್ನೆ ಮಾಡಿದ ರೀತಿಯಲ್ಲಿ ಅವರನ್ನು ಪ್ರಶ್ನೆ ಮಾಡಿ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ಯಾವ ಕಾರಣಕ್ಕೆ ಆ ಹೇಳಿಕೆ ನೀಡಿದೆ ಎಂದು ನೀವು ಪ್ರಧಾನಿಯವರನ್ನು ಕೇಳಿ.
ಮೋದಿ ಅವರು ಕಳೆದ 10 ವರ್ಷಗಳಲ್ಲಿ ಬೆಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಚರ್ಚೆ ಮಾಡಿ. ನೀರಿನ ಅಭಾವ ಇರುವ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಯಾಕೆ ನೀಡುತ್ತಿಲ್ಲ? ಈ ಯೋಜನೆಗೆ ಅನುಮತಿ ನೀಡಲು ಯಾವ ಸಮಸ್ಯೆ ಇದೆ. ನಾನು ಕನ್ನಡಿಗರ ಪರವಾಗಿ ಧ್ವನಿ ಎತ್ತಿದ್ದೇನೆ. ಅವರು ಅದನ್ನು ದೇಶ ವಿಭಜನೆ ಎಂದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ.
ಒಬ್ಬ ಭಾರತೀಯನಾಗಿ ಹಾಗೂ ಕನ್ನಡಿಗನಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನೆ ಮಾಡುತ್ತೇನೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಕೇಂದ್ರ ಸರ್ಕಾರವೇ ಕಾರಣ. ಅವರು ಏನೇ ಅಂದರೂ ಚಿಂತೆಯಿಲ್ಲ” ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ಶಾಡೋ ಸಿಎಂಗಳನ್ನೂ ಜನ ನೋಡಿದ್ದಾರೆ:
ಅನೇಕ ಸೂಪರ್ ಸಿಎಂಗಳಿದ್ದಾರೆ ಎಂಬ ಪ್ರಧಾನಿ ಟೀಕೆ ಬಗ್ಗೆ ಕೇಳಿದಾಗ, “ಅವರು ಈ ರೀತಿ ಹೇಳುವುದು ಹೊಸತೇನಲ್ಲ. ಅವರ ಸರ್ಕಾರ ಇದ್ದಾಗ ಯಾರೆಲ್ಲಾ ಶಾಡೋ ಸಿಎಂ ಆಗಿ ಕೆಲಸ ಮಾಡಿದ್ದಾರೆ ಎಂದು ಜನ ನೋಡಿದ್ದಾರೆ. ಅವರು ಹೇಳಿಕೆ ಕೇವಲ ಚುನಾವಣಾ ಗಿಮಿಕ್. ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದವರು, ನಂತರ ಅದು ಸುಳ್ಳು ಎಂದರು” ಎಂದು ತಿಳಿಸಿದರು.
ಕುಮಾರಸ್ವಾಮಿ ಆರೋಗ್ಯ ಬೇಗ ಸುಧಾರಿಸಲಿ:
ಡಿ.ಕೆ ಸುರೇಶ್ ನನ್ನ ಬದುಕಿಗೆ ವಿಷ ಹಾಕಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಯಾರ ಬದುಕಿಗೂ ವಿಷ ಹಾಕುವವನಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ಅವರು ಆರೋಗ್ಯ ತಪಾಸಣೆಗಾಗಿ ತೆರಳುತ್ತಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.
ಡಿ.ಕೆ. ಸಹೋದರರು ಚುನಾವಣೆ ಹಿನ್ನೆಲೆಯಲ್ಲಿ ಗಿಫ್ಟ್ ಹಂಚುತ್ತಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ತಿಳಿಸಿದರು.
ಪಾರದರ್ಶಕ ಚುನಾವಣೆಗೆ ಪ್ಯಾರಾ ಮಿಲಿಟರಿ ಕರೆಸಬೇಕು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಪ್ಯಾರಾ ಮಿಲಿಟರಿ ಆದರೂ ಕರೆಸಿಕೊಳ್ಳಲಿ, ಪ್ರಧಾನಮಂತ್ರಿ ಅವರನ್ನಾದರೂ ಕರೆಸಿಕೊಳ್ಳಲಿ. ನಮ್ಮ ತಕರಾರು ಏನೂ ಇಲ್ಲ. ನಾನು ಈವರೆಗೂ ಮಾಡಿರುವ ಕೆಲಸಗಳಿಗೆ ಮತದಾರರಿಂದ ಕೂಲಿ ಕೇಳುತ್ತಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ಕೆಲಸ ಮುಂದಿಟ್ಟು ಕೂಲಿ ಕೇಳುತ್ತಿದ್ದೇನೆ. ನೀವು ಈ ವಿಚಾರವನ್ನು ಜನರಿಗೆ ತಿಳಿಸಿ. ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ” ಎಂದು ತಿಳಿಸಿದರು.
ಬಲವಂತವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಶಾಲು ಹಾಕುತ್ತಿದ್ದಾರೆ ಎಂಬ ಸಿ. ಪಿ ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಬಲವಂತ ಮಾಡುವ ಅಭ್ಯಾಸವಿಲ್ಲ. ಅವರು ತಮ್ಮ ನಾಯಕರನ್ನು ಮೆಚ್ಚಿಸಿಕೊಳ್ಳಲು ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಾರೆ. ಕೆಲಸಗಳ ಮೂಲಕ ನಾನು ಜನರನ್ನು ತಲುಪಿದ್ದೇನೆ” ಎಂದು ತಿಳಿಸಿದರು.
ನಾನೊಬ್ಬ ಸ್ಟ್ರಾಂಗ್ CM, ನಿಮ್ಮ ಹಾಗೆ ವೀಕ್ PM ಅಲ್ಲ: ‘ಮೋದಿ’ ವಿರುದ್ಧ ಸಿದ್ಧರಾಮಯ್ಯ ವಾಗ್ಧಾಳಿ
ನಾನೊಬ್ಬ ಸ್ಟ್ರಾಂಗ್ CM, ನಿಮ್ಮ ಹಾಗೆ ವೀಕ್ PM ಅಲ್ಲ: ‘ಮೋದಿ’ ವಿರುದ್ಧ ಸಿದ್ಧರಾಮಯ್ಯ ವಾಗ್ಧಾಳಿ