ಬೆಂಗಳೂರು : ರಾಜ್ಯದ ಎಲ್ಲೆಡೆ ವರ್ಷದ ಮೊದಲ ಮಳೆಯಾಗುತ್ತಿದ್ದು, ಇದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಹಾನಿ ಸಂಭವಿಸಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು,ಬೆಂಗಳೂರಿನ ಜನತೆಗೆ ಶುದ್ಧ ನೀರು ಪೂರೈಸುವಂತೆ ‘BWSSB’ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಈ ಬಾರಿ 7,000 ಬೋರ್ವೆಲ್ ಡ್ರೈ ಆಗಿದೆ. ನೀರು ಇದ್ದರೆ ಒತ್ತುವರಿ ಆಗಲ್ಲ ಹಾಗೂ ಅಂತರ್ಜಲ ಮಟ್ಟ ಕುಸಿಯಲ್ಲ. ಹೀಗಾಗಿ ಕೆರೆ ತುಂಬಿಸಲು ಬಿಡಬ್ಲ್ಯೂಎಸ್‌ಎಸ್‌ಬಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಟ್ಯಾಂಕರ್ ನೀರು ವಿಚಾರ ಸಂಬಂಧ ಪಟ್ಟಂತೆ ಹಾಗೂ ಕೆರೆ ತುಂಬಿಸುವ ಕೆಲಸ ಬಿ ಡಬ್ಲ್ಯೂ ಎಸ್ ಎಸ್ ಬಿ ಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.
ನಿನ್ನೆ ಸಿಎಂ ಹಾಗೂ ನಾನು ಬೆಂಗಳೂರು ಸಿಟಿ ರೌಂಡ್ ನಡೆಸಿದ್ದೇವೆ. ಬೆಂಗಳೂರು ಸಿಟಿ ರೌಂಡ್ಸ್ ವೇಳೆ ನಾವು ಹಲವು ಸಮಸ್ಯೆಗಳನ್ನು ಗಮನಿಸಿದ್ದೇವೆ. ಬೆಂಗಳೂರಿನ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದೇನೆ.ಅಧಿಕಾರಿಗಳಿಗೆ 5 ಪ್ರೋಗ್ರಾಮ್ ಕೊಟ್ಟಿದ್ದೇನೆ ಶುದ್ಧ ನೀರು ಪೂರೈಸುವಂತೆ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕ್ವಾಲಿಟಿ ಚೆಕ್ ಮಾಡಲು ಸೂಚಿಸಿದ್ದೇನೆ. 2017 ರಲ್ಲಿ 2626 ಒತ್ತುವರಿ ಗುರುತಿಸಲಾಗಿತ್ತು. 2022-23 ರಲ್ಲಿ 256 ಒತ್ತುವರಿ ತೆರವು ಮಾಡಲಾಗಿದೆ. ಸ್ಯಾಟಲೈಟ್ ಮೂಲಕ ಕೆರೆ ನಾಲೆ ಒತ್ತುವರಿ ಸರ್ವೆಗೆ ಸೂಚಿಸಿದ್ದೇನೆ. ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.