ರಾಮನಗರ : “ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ನಾವು ಕನಕಪುರದ ಮೂರು ಕಡೆಗಳಲ್ಲಿ ದೊಡ್ದಆಲಹಳ್ಳಿ ಕೆಂಪೇಗೌಡರ 25 ಎಕರೆ ಜಮೀನು ದಾನ ಮಾಡಿದ್ದೇವೆ. ದೇವೇಗೌಡರ ಕುಟುಂಬದವರು ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ಒಂದೇ ಒಂದು ಗುಂಟೆ ಜಾಗ ದಾನ ಮಾಡಿದ್ದಾರಾ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರವಾಗಿ ಶುಕ್ರವಾರ ಚಕ್ಕೆರೆ, ಹೊನ್ನನಾಯಕನಹಳ್ಳಿ ಮತ್ತಿತರ ಚುನಾವಣೆ ಪ್ರಚಾರ ಸಭೆ ನಡೆಸಿದರು.
ದೇವೇಗೌಡರು ಗುರುವಾರ ಭಾಷಣ ಮಾಡುತ್ತಾ, “ಒಂದು ಶಾಲೆ ಮಾಡಲು ಜಾಗ ಕೇಳಿದರೆ ಡಿ.ಕೆ. ಶಿವಕುಮಾರ್ ದುಡ್ಡು, ದುಡ್ಡು ಅಂತಾರೆ” ಎಂದು ಮಾಡಿದ್ದ ಟೀಕೆಗೆ ಡಿಸಿಎಂ ಅವರು ಹೀಗೆ ತಿರುಗೇಟು ನೀಡಿದರು.
“ದೇವೇಗೌಡರು ನಿನ್ನೆ ಚುನಾವಣೆ ಪ್ರಚಾರ ಮಾಡುತ್ತಾ ಡಿ.ಕೆ. ಸಹೋದರರು ಜಮೀನು ಕಬ್ಜ ಮಾಡಿಕೊಂಡಿದ್ದು, ಶಾಲೆ ಕಟ್ಟಲು ಜಾಗ ನೀಡುತ್ತಿಲ್ಲ. ಜಾಗ ಕೇಳಿದರೆ ದುಡ್ಡು, ದುಡ್ಡು ಅಂತಾರೆ ಎಂದು ಆರೋಪ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ನಿಮಗೆ ಕನಕಪುರದಲ್ಲಿ ಸಂಬಂಧಿಕರಿದ್ದರೆ ಕೇಳಿ ನೋಡಿ. ಹಳ್ಳಿಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಶಾಲೆಗಳ ನಿರ್ಮಾಣಕ್ಕೆ ನಾವು ಮೂರು ಕಡೆ ನಮ್ಮ ತಂದೆ ದೊಡ್ಡಆಲಹಳ್ಳಿ ಕೆಂಪೇಗೌಡರಿಗೆ ಸೇರಿದ 25 ಎಕರೆ ಜಾಗವನ್ನು ದಾನ ಮಾಡಿದ್ದೇವೆ. ಯಾರು ಬೇಕಾದರೂ ಹೋಗಿ ನೋಡಬಹುದು.
ಕುಮಾರಸ್ವಾಮಿ ಹಾಗೂ ದೇವೇಗೌಡರೇ, ನೀವು ಎಲ್ಲಾದರೂ ಒಂದು ಎಕರೆ ಜಾಗ ದಾನ ಮಾಡಿದ್ದೀರಾ? ನಾನು ನಿಮ್ಮ ಹಾಗೂ ನಿಮ್ಮ ಜಮೀನಿನ ವಿಚಾರಗಳನ್ನು ಈಗ ಮಾತನಾಡಲು ಹೋಗುವುದಿಲ್ಲ. ಚುನಾವಣೆಗಾಗಿ ನಿಮ್ಮನ್ನು ಟೀಕಿಸುವುದಿಲ್ಲ. ನಿಮ್ಮ ವಯಸ್ಸಿಗೆ ನಾನು ಗೌರವ ನೀಡುತ್ತೇನೆ. ಬಡವರಿಗೆ ಆಗಿರುವ ಮೋಸದ ಬಗ್ಗೆ ಧ್ವನಿ ಎತ್ತಲು ನಾನು ಈ ಪ್ರಶ್ನೆ ಕೇಳಬೇಕಾಗಿದೆ. ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ನೀವು ಹಾಗೂ ನಿಮ್ಮ ಕುಟುಂಬದವರು ಒಂದು ಗುಂಟೆ ಜಮೀನನ್ನು ನೀಡಿದ್ದೀರಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಕ್ಷೇತ್ರಕ್ಕೆ ಏನು ಮಾಡಿದ್ದಾರೆ?
ಯೋಗೇಶ್ವರ್ ಅವರು 4-5 ಕೋಟಿ ರೂ. ವೆಚ್ಚ ಮಾಡಿ ಬಿಸಿಲಮ್ಮ ದೇವಾಲಯ ಅಭಿವೃದ್ಧಿ ಮಾಡಿದ್ದಾರೆ. ಮಹದೇಶ್ವರ ದೇವಾಲಯ ಅಭಿವೃದ್ಧಿ ಮಾಡಿದ್ದಾರೆ. ಅದನ್ನು ನೋಡಿ ಸಂತೋಷವಾಗಿದೆ. ಕುಮಾರಸ್ವಾಮಿ ಅವರು ರಾಮನಗರ, ಚನ್ನಪಟ್ಟಣ ಕ್ಷೇತ್ರದಲ್ಲಿ ಒಂದು ದೇವಾಲಯ ಅಭಿವೃದ್ಧಿ ಮಾಡಿದ್ದಾರಾ? ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕ ನೀಡಿದ್ದಾರಾ? ಇಲ್ಲವಾದರೆ, ಮತ್ತೆ ಯಾಕೆ ನೀವು ಮತ ಕೇಳುತ್ತಿದ್ದೀರಿ? ನಿಮಗೆ ಹಣವೇ ಮುಖ್ಯವೇ? ನೀವು ಒಂದೊಂದು ಮತಕ್ಕೆ 2-3 ಸಾವಿರ ಹಣ ನೀಡಬಹುದು. ಆದರೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿದೆ. ಇದಕ್ಕಾಗಿ 56 ಸಾವಿರ ಕೋಟಿ ನೀಡುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ಅವರೇ ನೀವು ಹಾಗೂ ನಿಮ್ಮ ಧರ್ಮಪತ್ನಿ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಶಾಸಕರಾಗಿದ್ದವರು. ನೀವು ಕೋವಿಡ್ ಸಮಯದಲ್ಲಿ ಜನರಿಗೆ ನೆರವಾಗಿದ್ದೀರಾ? ಡಿ.ಕೆ. ಸುರೇಶ್ ಜನರಿಗೆ ನೆರವಾಗಲಿಲ್ಲವೇ? ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಲಿಲ್ಲವೇ? ಇಂತಹ ಒಂದು ಕೆಲಸವನ್ನು ನೀವು ಮಾಡಲಿಲ್ಲ. ಮನೆಯಲ್ಲಿ ಅವಿತು ಕುಳಿತ್ತಿದ್ರಿ. ಯಾರಿಗೂ ಸಹಾಯ ಮಾಡಲಿಲ್ಲ. ಕಷ್ಟಕ್ಕೆ ಆಗಲಿಲ್ಲವಾದರೆ ಮತ್ತೆ ಯಾವಾಗ ಜನರ ಜೊತೆ ನಿಲ್ಲುತ್ತೀರಾ?
ಕಾರ್ಯಕರ್ತರ ಪರಿಸ್ಥಿತಿ ಏನು?
ನನ್ನ ಮೊಮ್ಮಗನ ಪಟ್ಟಾಭಿಷೇಕ ಮಾಡುವವರೆಗೂ ನಾನು ಬದುಕಿರುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ. ಬಹಳ ಸಂತೋಷ, ನೀವು ನಿಮ್ಮ ಮೊಮ್ಮಗನ ಪಟ್ಟಾಭಿಷೇಕ ಮಾಡಿ. ಆದರೆ ನಿಮಗಾಗಿ ದುಡಿದ ಕಾರ್ಯಕರ್ತರ ಪರಿಸ್ಥಿತಿ ಏನಾಗಬೇಕು ಎಂದು ನಿಮ್ಮನ್ನು ಕೇಳಲು ಬಯಸುತ್ತೇನೆ. ಕುಮಾರಸ್ವಾಮಿ ಅವರು ಕ್ಷೇತ್ರದ ಯಾವುದಾದರೂ ಒಬ್ಬ ಕಾರ್ಯಕರ್ತನಿಗೆ ಅಧಿಕಾರ ಕೊಟ್ಟಿದ್ದಾರಾ? ಇಲ್ಲ. ಈ ಕ್ಷೇತ್ರದ ಬಡವರನ್ನು ಮೇಲೆತ್ತಲು ನಾವಿದ್ದೇವೆ, ಯೋಗೇಶ್ವರ್ ಇದ್ದಾರೆ ಎಂದು ಹೇಳಿದರು.
ಜನರ ಕಷ್ಟಕ್ಕೆ ಸ್ಪಂದಿಸಿದಕ್ಕೆ 1.23 ಲಕ್ಷ ಮತಗಳಿಂದ ಗೆಲ್ಲಿಸಿದರು:
ನೀವು ಕುಮಾರಸ್ವಾಮಿ ಅವರನ್ನು 2 ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದೀರಿ. ಕುಮಾರಸ್ವಾಮಿ ಅವರು ಈ ಕ್ಷೇತ್ರವನ್ನು ಖಾಲಿ ಮಾಡಿದ ನಂತರ ನಾನು ಜನರ ಮನೆಬಾಗಿಲಿಗೆ ಸರ್ಕಾರ ಹಾಗೂ ಅಧಿಕಾರಿಗಳನ್ನು ಕರೆದುಕೊಂಡು ಬಂದು ಅವರ ಕಷ್ಟ ಆಲಿಸಿದೆ. 26 ಸಾವಿರ ಜನ ಮನೆ, ನಿವೇಶನ, ಸಾಲಸೌಲಭ್ಯ, ಪಿಂಚಣೆ, ರಸ್ತೆ, ನೀರಾವರಿ ಸೌಲಭ್ಯ ಸೇರಿದಂತೆ ತಮ್ಮ ಅನೇಕ ಸಮಸ್ಯೆಗಳನ್ನು ಬಗೆಹರಿಸುವಂತೆ ನಮಗೆ ಅರ್ಜಿ ಸಲ್ಲಿಸಿದಿರಿ.
ಶಾಸಕರು ಹಾಗೂ ಸಂಸದರು ನಮ್ಮ ಕಷ್ಟಕ್ಕೆ ಸ್ಪಂದಿಸಿ ನಿಮ್ಮ ಸೇವೆ ಮಾಡುವ ಉದ್ದೇಶದಿಂದ ನೀವು ಅವರಿಗೆ ಮತ ಹಾಕುತ್ತೀರಿ. ಕಳೆದ ಎಂಟು ಚುನಾವಣೆಗಳಿಂದ ನಾನು ಸತತವಾಗಿ ಶಾಸಕನಾಗಿ ಗೆದ್ದಿದ್ದೇನೆ. ಕಳೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದು ಬಿಟ್ಟರೆ ಮತ್ತೆ ಕ್ಷೇತ್ರಕ್ಕೆ ಹೋಗಿ ಮತ ಕೇಳಲಿಲ್ಲ. ಆದರೂ ಕನಕಪುರದ ಜನ ನನನ್ನು 1.23 ಲಕ್ಷ ಮತಗಳ ಭಾರಿ ಅಂತರದಿಂದ ಗೆಲ್ಲಿಸಿದರು. ನಾನು ನಿರಂತರವಾಗಿ ಕ್ಷೇತ್ರದ ಜನರ ಜತೆ ಸಂಪರ್ಕ ಸಾಧಿಸಿ ಆ ಕ್ಷೇತ್ರದ ಸಮಸ್ಯೆಗಳನ್ನು ನಿರಂತವಾಗಿ ಬಗೆಹರಿಸುತ್ತಾ ಬಂದೆ. ಹೀಗಾಗಿ ಅವರು ಮತ ಹಾಕಿದರು.
ಕುಮಾರಸ್ವಾಮಿ ಅವರು ಸಂಸದರಾಗಬೇಕು ಎಂದು ಈ ಕ್ಷೇತ್ರ ಬಿಟ್ಟು ಹೋದರು. ಈ ಕ್ಷೇತ್ರದಲ್ಲಿ ಇದುವರೆಗೂ ನಿಖಿಲ್ ಸ್ಪರ್ಧೆ ಮಾಡಿರಲಿಲ್ಲ. ಈ ಹಿಂದೆ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಶಾಸಕರಾಗಿ ಹಾಗೂ ದೇವೇಗೌಡರು ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಕುಮಾರಸ್ವಾಮಿ ಅವರು ಈ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರ ಮಂತ್ರಿಯಾದ ನಂತರ ಮತ್ತೆ ನಿಮ್ಮ ಬಳಿ ಬಂದು ಈ ಭಾಗದಲ್ಲಿ ಕೈಗಾರಿಕೆ, ಕಾರ್ಖಾನೆ ಮಾಡುತ್ತೇವೆ, ನಿಮಗೆ ಉದ್ಯೋಗ ನೀಡುತ್ತೇವೆ ಎಂದು ಜನರಿಗೆ ಭರವಸೆ ನೀಡಬಹುದಿತ್ತು. ಆದರೆ ಆ ಕೆಲಸ ಮಾಡಲಿಲ್ಲ.
ಕುಮಾರಸ್ವಾಮಿ ಕೈಗಾರಿಕೆ ಮಾಡುವುದಾದರೆ ಜಾಗ ನೀಡಲು ಸಿದ್ಧ
ನಾನು ಈ ಕ್ಷೇತ್ರದಲ್ಲಿ ಉದ್ಯೋಗ ಮೇಳೆ ನಡೆಸಿದ ಬಳಿಕ, ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಉದ್ಯೋಗ ಮೇಳ ನಡೆಸಿದರು. ಅದೇ ಕೆಲಸವನ್ನು ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾಕೆ ಮಾಡಲಿಲ್ಲ? ನಾವು ಕೈಗಾರಿಕೆ ಮಾಡಲು ಡಿ.ಕೆ. ಶಿವಕುಮಾರ್ ಜಮೀನು ನೀಡುತ್ತಿಲ್ಲ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅವರು ಕೇಂದ್ರದ ಮಂತ್ರಿಯಾಗಿ ಕೇವಲ ಆರು ತಿಂಗಳಾಗಿದೆ. ಅವರು ಯಾವತ್ತೂ ಇಂತಹ ಕಡೆ ಕಾರ್ಖಾನೆ, ಕೈಗಾರಿಕೆ ಮಾಡುತ್ತೇವೆ ಎಂದು ಹೇಳಿಲ್ಲ. ಒಂದು ವೇಳೆ ಅವರು ಕೈಗಾರಿಕೆ, ಕಾರ್ಖಾನೆ ಮಾಡಲು ಅನುಮತಿ ನೀಡಿದರೆ, ಕೇತಗಾನಹಳ್ಳಿಯಲ್ಲಿ 200-300 ಎಕರೆ ಸೇರಿದಂತೆ ಇತರೆ ಕಡೆಗಳಲ್ಲಿ ಜಮೀನಿದ್ದು, ಅವುಗಳನ್ನು ನೀಡಲು ಸಿದ್ಧರಿದ್ದೇವೆ. ಬಡವರಿಗೆ ಅನುಕೂಲ ಮಾಡುವ ಕೆಲಸಕ್ಕೆ ನಾವು ಎಂದಿಗೂ ಬೇಡ ಎನ್ನುವುದಿಲ್ಲ.
ಕುಮಾರಸ್ವಾಮಿ ಅವರೇ, ಸುಳ್ಳು ಹೇಳುವುದಕ್ಕೂ ಒಂದು ಇತಿಮಿತಿ ಇರಬೇಕು. ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ಆರು ವರ್ಷ ಶಾಸಕರಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಊರಿಗೆ ಎಂದಾದರೂ ಬಂದಿದ್ದಾರಾ? ನೀವು ದೇವರಾಜ ಅರಸು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಅವರ ಹೆಸರು ಕೇಳಿದ್ದೀರಿ. ಕಾಂಗ್ರೆಸ್ ಪಕ್ಷದ ಬೆಂಬಲದಿಂದ ದೇವೇಗೌಡರೂ ಕೂಡ ಪ್ರಧಾನಮಂತ್ರಿಯಾಗಿದ್ದರು ಎಂದರು.
ಕಾಂಗ್ರೆಸ್ ಕೊಟ್ಟಂತಹ ಒಂದು ಯೋಜನೆ ಕೊಟ್ಟಿದ್ದಾರಾ?: ಬಿಜೆಪಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನೆ
ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದ ಭಾರತ | ICC Champions Trophy