ಬೆಂಗಳೂರು : ರಾಜ್ಯದಲ್ಲಿ ಇತ್ತೀಚಿಗೆ ಅಧಿವೇಶನದಲ್ಲಿ ‘ಹನಿ ಟ್ರ್ಯಾಪ್’ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ನಡೆದಿದೆ ಎನ್ನಲಾಗಿದ್ದು, ಬಳಿಕ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ CID ಗೆ ವಹಿಸಿತ್ತು. ಇದೀಗ CID ವಿಚಾರಣೆ ವೇಳೆ ನನ್ನ ಕೈ ಹಿಡಿದು ಹನಿಟ್ರ್ಯಾಪ್ ಗೆ ಯತ್ನಿಸಿದ್ದ ಯುವತಿಗೆ ಕಪಾಳಿಗೆ ಬಾರಿಸಿ ಕಳಿಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ.
3 ದಿನಗಳ ಹಿಂದೆ ಬೆಂಗಳೂರಿನ ಜಯಮಹಲ್ ರಸ್ತೆಯ ಸಚಿವರ ಸರ್ಕಾರಿ ನಿವಾಸದಲ್ಲಿ ರಾಜಣ್ಣರನ್ನು ವಿಚಾರಣೆಗೊಳಪಡಿಸಿ ಸಿಐಡಿ ಹೇಳಿಕೆ ದಾಖಲಿಸಿದೆ. ಆದರೆ ಹನಿಟ್ರ್ಯಾಪ್ ಯತ್ನ ಕೃತ್ಯದ ಬಗ್ಗೆ ಖಚಿತ ವಾದ ಮಾಹಿತಿ ನೀಡದೆ ಸಚಿವರು ಅಸ್ಪಷ್ಟ ಹಾಗೂ ಗೊಂದಲ ಮಯ ವಿವರ ನೀಡಿದ್ದಾರೆ ಎನ್ನಲಾಗಿದೆ. ಎರಡು ಬಾರಿ ತಮ್ಮನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿತ್ತು. ಬೆಂಗಳೂರಿನ ಸರ್ಕಾರಿ ನಿವಾಸಕ್ಕೆ ಯುವತಿ ಜತೆ ಗಡ್ಡಧಾರಿ ಯುವಕನೊಬ್ಬ ಬಂದಿದ್ದ.
ಆದರೆ ಅವರಾರೂ ನನಗೆ ಪರಿಚಿತರಲ್ಲ, ನನ್ನ ಗೃಹ ಕಚೇರಿಯಲ್ಲಿ ಏಕಾಏಕಿ ಕೈ ಹಿಡಿದು ಎಳೆದು ಅಸಭ್ಯವಾಗಿ ವರ್ತಿಸಿದ್ದರಿಂದ ವಿಚಲಿತನಾದೆ. ಆಗ ಆಕೆಯ ಕಪಾಳಕ್ಕೆ ಹೊಡೆದು ಕಳುಹಿಸಿದ್ದೇನೆ. ನನ್ನ ಸರ್ಕಾರಿ ನಿವಾಸಕ್ಕೆ ಹನಿಟ್ರ್ಯಾಪ್‌ಗೆ ಯಾವ ದಿನ ಯುವತಿಯರು ಬಂದಿದ್ದರು ಎಂಬುದು ಸ್ಪಷ್ಟವಾಗಿ ನೆನಪಿಲ್ಲ, ಬಂದಿದ್ದಂತೂ ಸತ್ಯ, ಆದರೆ ಯಾವ ದಿನ ಎಂದು ಗೊತ್ತಿಲ್ಲ, ಅಲ್ಲದೆ ನಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಸಹ ಇಲ್ಲ ಎಂಬ ಸಂಗತಿ ಘಟನೆ ಬಳಿಕವೇ ತಿಳಿಯಿತು ಎಂದಿದ್ದಾರೆ.
ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ನನ್ನ ಸರ್ಕಾರಿ ನಿವಾಸಕ್ಕೆ ಹನಿಟ್ಯಾಪ್ ದುರುದ್ದೇಶದಿಂದಲೇ ಎರಡು ಬಾರಿ ಅಪರಿಚಿತ ಯುವತಿಯರು ಬಂದಿದ್ದರು. ಪ್ರತಿ ಬಾರಿ ಬೇರೆ ಬೇರೆ ಯುವತಿಯರು ಬಂದಿದ್ದು, ಅವರೊಂದಿಗೆ ಗಡ್ಡಧಾರಿ ಹುಡುಗನಿದ್ದ. ನನಗೆ ಅವರಾರ ಮುಖವೂ ಪರಿಚಯ ಇಲ್ಲ ಎಂದು ರಾಜಣ್ಣ ಹೇಳಿದ್ದಾರೆ ಎನ್ನಲಾಗಿದೆ.ಮೊದಲ ಬಾರಿಗೆ ನನ್ನ ಭೇಟಿಗೆ ಬಂದಿದ್ದ ಯುವತಿ ಏನೋ ಮಾತನಾಡಬೇಕಿದೆ ಎಂದಿದ್ದಳು. ಆಗ ನನಗೆ ಸಮಯವಿಲ್ಲದ ಕಾರಣ ಆಕೆಯ ಬಗ್ಗೆ ಲಕ್ಷ್ಯ ಕೊಡಲಿಲ್ಲ. ಕೆಲ ಹೊತ್ತು ಕಾದು ಆಕೆ ಮರಳಿದ್ದಳು. ಇದಾದ ಕೆಲ ದಿನಗಳ ಬಳಿಕ ಮತ್ತೊಬ್ಬಳು ಬಂದಿದ್ದಳು.
ಆಕೆ ಬಂದಾಗ ನನ್ನ ಗೃಹ ಕಚೇರಿಯಲ್ಲಿ ಕೆಲ ನನ್ನೊಂದಿಗೆ ಗೌಪ್ಯವಾಗಿ ಬಹುಮುಖ ವಿಚಾರ ಮಾತನಾಡಬೇಕಿದೆ ಎಂದು ಆಕೆ ಕೋರಿದಳು. ಆಗ ಚೇಂಬರ್ ಗೆ ಕರೆದು ಮಾತನಾಡಿಸಿದೆ. ಆದರೆ ದಿಢೀರನೇ ನನ್ನ ಕೈ ಹಿಡಿದು ಎಳೆದು ಆಕೆ ಆಸಭ್ಯವಾಗಿ ವರ್ತಿಸಿದ್ದಳು. ಇದರಿಂದ ವಿಚಲಿತನಾದೆ. ಕೋಪದಲ್ಲಿ ಆಕೆಯ ಚಪಾಳಕ್ಕೆ ಹೊಡೆದು ಬೈದು ಕಳುಹಿಸಿದ್ದೇನೆ ಎಂದು ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.