ಬೆಂಗಳೂರು : ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಸಿಕೊಂಡಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ. ಸಮಾರಸ್ವಾಮಿಯವರು ಆಧಾರ ರಹಿತ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಬಂಡೆ ಒಡೆದಿದ್ದರೆ, ನನ್ನ ಜಮೀನಿನ ಬಂಡೆಯನ್ನು ಕಾನೂನು ಬದ್ಧವಾಗಿ ಒಡೆದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಅವರಿಗೆ ವೈಯಕ್ತಿಕವಾಗಿ ಗೌರವ ನೀಡುತ್ತಿದ್ದೇನೆ, ಮುಂದೆಯೂ ನೀಡುತ್ತೇನೆ. ಆದರೂ ಅವರು ಪದೇ ಪದೇ ನನ್ನ ಬಗ್ಗೆ ವೈಯಕ್ತಿಕ ವಿಚಾರವಾಗಿ ಬಂಡೆ ಒಡೆದ, ವಿಷ ಹಾಕಿದ ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಯಿಸಿಕೊಂಡಿದ್ದೇನೆ ಎಂದೆಲ್ಲಾ ಆಧಾರ ರಹಿತ ಟೀಕೆ ಮಾಡುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ಅವರು ಮಹಿಳೆಯರ ಕುರಿತ ತಮ್ಮ ನುಡಿಮುತ್ತುಗಳನ್ನು ಮರೆ ಮಾಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಈರೀತಿ ಆರೋಪ ಮಾಡುತ್ತಿದ್ದಾರೆ. ಆದರೆ, ಅವರ ಮಾತುಗಳಿಂದ ಮಹಿಳೆಯರಿಗೆ ಆಗಿರುವ ಅವಮಾನವನ್ನು ಅವರ ಮನಸ್ಸಿನಿಂದ ತೆಗೆಯಲು ಸಾಧ್ಯವಿಲ್ಲ ಎಂದರು. ಕುಮಾರಸ್ವಾಮಿ ಇಂತಹ ಹೇಳಿಕೆ ಕೊಟ್ಟರೂ ಬಿಜೆಪಿಯವರು ಯಾಕೆ ಪ್ರತಿಕ್ರಿಯಿಸುತ್ತಿಲ್ಲ. ಬಿಎಸ್‌ವೈ ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜಕೀಯದಲ್ಲಿಯಾವುದೂ ಶಾಶ್ವತವಲ್ಲ. ಚುನಾವಣೆ ನಂತರ ಅವರ ಪಕ್ಷ ಯಾವ ಸ್ಥಿತಿಗೆ ತಲುಪಲಿದೆ ಕಾದು ನೋಡಿ. ನಮ್ಮಂತಹವರನ್ನು, ಅಂದರೆ ಸಮುದಾಯವನ್ನು ಕಳೆದುಕೊಳ್ಳುವುದು ಸರಿಯಲ್ಲ. ಸಮುದಾಯಕ್ಕಾಗಿ ನಾನು ಅವರಿಗೆ ಗೌರವ ಕೊಟ್ಟು ಅವರು ಏನೇ ಅಂದರೂ ಸಹಿಸಿಕೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.