ನವದೆಹಲಿ:ಭಾರತೀಯ ಕುಸ್ತಿ ಫೆಡರೇಶನ್‌ನ (WFI) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಹೋರಾಟದಲ್ಲಿ ಒಲಿಂಪಿಯನ್ ವಿನೇಶ್ ಫೋಗಟ್ ಇಂದು ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿರುವ ಆರು ಮಂದಿ ಮಹಿಳಾ ಕುಸ್ತಿಪಟುಗಳ ಪೈಕಿ ನಾನೂ ಒಬ್ಬಳು ಎಂದು ಅವರು ಮೊದಲ ಬಾರಿಗೆ ಬಹಿರಂಗವಾಗಿ ಘೋಷಿಸಿದ್ದಾರೆ.
ಇದುವರೆಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನ್ವಯ ಸಂತ್ರಸ್ತೆಯರ ಹೆಸರನ್ನು ಗೌಪ್ಯವಾಗಿಡಲಾಗಿತ್ತು. ಆದರೆ, ಪ್ರಸ್ತುತ ಎದುರಾಗಿರುವ ಕೆಲವು ಸಂಕೀರ್ಣ ಸಂದರ್ಭಗಳಿಂದಾಗಿ ಈ ಸತ್ಯವನ್ನು ಹೇಳಲೇಬೇಕಾಗಿದೆ ಎಂದು ವಿನೇಶ್ ತಿಳಿಸಿದ್ದಾರೆ.
2026ರ ಏಷ್ಯನ್ ಗೇಮ್ಸ್‌ಗೆ ಮರಳಲು ಸಿದ್ಧತೆ ನಡೆಸುತ್ತಿರುವ ವಿನೇಶ್, ತಮ್ಮ ಪುನರಾಗಮನವನ್ನು ತಡೆಯಲು ಕುಸ್ತಿ ಫೆಡರೇಶನ್ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬ್ರಿಜ್ ಭೂಷಣ್ ಅವರ ಪ್ರಭಾವವಿರುವ ಉತ್ತರ ಪ್ರದೇಶದ ಗೊಂಡಾದಲ್ಲಿ ರಾಷ್ಟ್ರೀಯ ಓಪನ್ ರ‍್ಯಾಂಕಿಂಗ್ ಟೂರ್ನಿ ಮತ್ತು ಟ್ರಯಲ್ಸ್ ಆಯೋಜಿಸಲಾಗಿದ್ದು, ಅಲ್ಲಿ ತಮಗೆ ಮತ್ತು ತಮ್ಮ ತಂಡಕ್ಕೆ ಸುರಕ್ಷತೆಯಿಲ್ಲ ಎಂದು ವಿನೇಶ್ ಆತಂಕ ವ್ಯಕ್ತಪಡಿಸಿದ್ದಾರೆ.








