ಧಾರವಾಡ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ. ಪಕ್ಷವು ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ನಾವು ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭೆ ತಯಾರಿ ಕುರಿತು ಕಾಂಗ್ರೆಸ್ ಸಭೆ ಹಿನ್ನೆಲೆ ಧಾರವಾಡ ನೌಕರರ ಭವನದಲ್ಲಿ ಸಭೆಗೂ ಮುಂಚೆ ಮಾತನಾಡಿದ ಅವರು, ಪಕ್ಷದ ರಾಜ್ಯ ಅಧ್ಯಕ್ಷರು, ಸಿಎಂ ಸಭೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ಬಗ್ಗೆ ಆ ಸಭೆಯಲ್ಲಿ ಚರ್ಚೆ ಆಗಲಿದೆ. ಟಿಕೆಟ್ ಆಕಾಂಕ್ಷಿಗಳು, ಅಭ್ಯರ್ಥಿಗಳ ಬಗ್ಗೆ ಆ ಸಭೆಯಲ್ಲಿ ಚರ್ಚೆ ಆಗುತ್ತದೆ ಎಂದರು.
ಪಕ್ಷಕ್ಕೆ ಹೊಸಬರ ಸೇರ್ಪಡೆ ವಿಚಾರಕ್ಕೆ ಮಾತನಾಡಿದ ಅವರು, ಪಕ್ಷಕ್ಕೆ ತತ್ವ ಸಿದ್ಧಾಂತ ಒಪ್ಪಿ ಯಾರೇ ಬಂದರು ತೆಗೆದುಕೊಳ್ಳುತ್ತೇವೆ. ಯಾರೇ ಬಂದರೂ ತೆಗೆದುಕೊಳ್ಳಲು ಸಿದ್ಧವಿದ್ದೇವೆ ಎಂದು ಹೇಳಿದರು.
ಮುನೇನಕೊಪ್ಪ ಸೇರ್ಪಡೆ ವಿಚಾರಕ್ಕೆ ಮಾತನಾಡಿ, ಮುನೇನಕೊಪ್ಪ ಜೊತೆ ಈ ವಿಷಯವಾಗಿ ನಾನು ಮಾತನಾಡಿಲ್ಲ. ನಾನಾಗಿಯೇ ಯಾರನ್ನು ಕರೆಯುತ್ತಿಲ್ಲ. ಸ್ವಯಂ ಪ್ರೇರಣೆಯಿಂದ ಅನೇಕರು ಬಂದಿದ್ದಾರೆ. ಹಾಗೆಯೇ ಅನೇಕರು ಬರುತ್ತಾರೆ. ನಾನಂತೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನಗೆ ಟಿಕೆಟ್ ಕೊಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, ಲೋಕಸಭೆ ಚುನಾವಣೆಯ ಬಗ್ಗೆ ಇವತ್ತು ಸಭೆ ಆಗುತ್ತಿದೆ. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಸಂಬಂಧಿಸಿದ ಸಭೆ ಇದು. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಈ ಸಭೆ ಆಗುತ್ತಿದೆ. ಪಕ್ಷದ ಸಂಘಟನೆ ಮತ್ತು ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ಆಗಲಿದೆ. ಟಿಕೆಟ್ ಫೈನಲ್ ಲಿಸ್ಟ್ ಹೈಕಮಾಂಡ್‌ಗೆ ತಲುಪಿದೆ ಎಂದರು.
ಧಾರವಾಡ ಕ್ಷೇತ್ರದ ವೀಕ್ಷಕಿ ಲಕ್ಷ್ಮಿ ಹೆಬ್ಬಾಳ್ಳರ್ ಲಿಸ್ಟ್ ತಲುಪಿಸಿದ್ದಾರೆ. ಹೈಕಮಾಂಡ್, ಸಿಎಂ, ಪಕ್ಷದ ಅಧ್ಯಕ್ಷರು ಸರ್ವೆ ನೋಡಿ ತೀರ್ಮಾನ ಮಾಡುತ್ತಾರೆ. ಯಾರಿಗೆ ಟಿಕೆಟ್ ಕೊಟ್ಟರೂ ನಾವೆಲ್ಲ ಒಗ್ಗಟ್ಟಾಗಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.