ನವದೆಹಲಿ : ಪತ್ನಿಯ ಆತ್ಮಹತ್ಯೆ ಪ್ರಕರಣದಲ್ಲಿ ಸರಿಯಾದ ಪುರಾವೆಗಳಿಲ್ಲದಿದ್ದರೆ ಪತಿಯನ್ನ ತಪ್ಪಿತಸ್ಥ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. 30 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಯನ್ನ ಖುಲಾಸೆಗೊಳಿಸಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 113 ಎ ಈ ಪ್ರಕರಣದಲ್ಲಿ ಪತಿಗೆ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೆಕ್ಷನ್ 113ಎ ಪ್ರಕಾರ, ಮದುವೆಯಾದ ಏಳು ವರ್ಷಗಳೊಳಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಅವಳ ಪತಿ ಮತ್ತು ಅವನ ಸಂಬಂಧಿಕರು ಜವಾಬ್ದಾರರಾಗಿರುತ್ತಾರೆ. ನ್ಯಾಯಮೂರ್ತಿಗಳಾದ ಜೆ.ಬಿ ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನ್ಯಾಯಪೀಠವು ಪತಿಯ ಕಿರುಕುಳವೇ ಆತ್ಮಹತ್ಯೆಯ ಹಿಂದಿನ ಕಾರಣವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ತನ್ನ ಹೆಂಡತಿಯ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಆರೋಪಿಯ ನೇರ ಕ್ರಿಯೆ ಇದ್ಯಾ ಅಥವಾ ಇಲ್ಲವೇ ಎಂಬುದು ಸಹ ನಿರ್ಣಾಯಕವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮದುವೆಯಾದ ಏಳು ವರ್ಷಗಳೊಳಗೆ ಆತ್ಮಹತ್ಯೆ ನಡೆದಿರುವುದರಿಂದ, ಆರೋಪಿಯನ್ನ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
1993ರಲ್ಲಿ ಪತ್ನಿಯ ಆತ್ಮಹತ್ಯೆಗೆ ಕಾರಣನಾದ ಆರೋಪದ ಮೇಲೆ ನರೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪತಿ ಮತ್ತು ಆತನ ಸಂಬಂಧಿಕರ ಕಿರುಕುಳದಿಂದಾಗಿ ನರೇಶ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ನರೇಶ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಕೊನೆಗೆ ಅವರು ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿದರು.
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪತಿಯ ಕಿರುಕುಳದಿಂದಾಗಿ ಪತ್ನಿ ಸಾವನ್ನಪ್ಪಿದ್ದಾರೆ ಎಂದು ಹೇಳುವುದು ಊಹಾಪೋಹ ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಜೆ.ಬಿ ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ನರೇಶ್ ಅವರನ್ನು ಖುಲಾಸೆಗೊಳಿಸಿದೆ.
1993ರಲ್ಲಿ ಪತ್ನಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನರೇಶ್ ವಿರುದ್ಧ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅವರನ್ನ ಖುಲಾಸೆಗೊಳಿಸಲಾಯಿತು. ಆ ಮೂಲಕ ಮೂರು ದಶಕಗಳ ಕಾನೂನು ಹೋರಾಟವನ್ನ ಸುಪ್ರೀಂ ಕೋರ್ಟ್ ಕೊನೆಗೊಳಿಸಿದೆ.