ಮಂಡ್ಯ: ಹೆಂಡತಿಯ ಮುಂದೆ ತಾನು ದೊಡ್ಡ ಶ್ರೀಮಂತ ಎಂದು ಬಿಲ್ಡಪ್ ಕೊಟ್ಟು ‘ಸ್ಟೇಟಸ್’ ಕಾಯ್ದುಕೊಳ್ಳಲು ಹೋಗಿ, ಕೊನೆಗೆ ಪೊಲೀಸರ ಅತಿಥಿಯಾದ ಖತರ್ನಾಕ್ ಕಳ್ಳನೊಬ್ಬನ ರೋಚಕ ಕಥೆಯಿದು! ಮಂಡ್ಯ ಜಿಲ್ಲೆಯ ಕಿರುಗಾವಲು ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ನಾಲ್ವರು ನಟೋರಿಯಸ್ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದ ಗುರುಪ್ರಸಾದ್ ಅಲಿಯಾಸ್ ಗುರು (36), ರೋಹಿತ್ ಅಲಿಯಾಸ್ ಗೆದ್ವಾ (20), ನಂಜೇಗೌಡ ಅಲಿಯಾಸ್ ಕಾಶಿ (19) ಹಾಗೂ ಮಣಿಗೆರೆ ಗ್ರಾಮದ ಮಾದೇಶ ಅಲಿಯಾಸ್ ಮಾದ (20) ಬಂಧಿತ ಆರೋಪಿಗಳು.
ಹೆಂಡತಿ ಎದುರು ಬಿಲ್ಡಪ್ಗಾಗಿ ಕಳ್ಳತನ!
ಬಂಧಿತರ ಪೈಕಿ ಪ್ರಮುಖ ಆರೋಪಿಯಾದ ಗುರುಪ್ರಸಾದ್, ತನ್ನ ಹೆಂಡತಿಯ ಮುಂದೆ ತಾನು ಅತ್ಯಂತ ಶ್ರೀಮಂತ ಎನ್ನುವುದನ್ನು ತೋರಿಸಿಕೊಳ್ಳುವ ಹಪಾಹಪಿಗೆ ಬಿದ್ದು ಈ ದಾರಿಗೆ ಇಳಿದಿದ್ದ. ಸುಲಭವಾಗಿ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸಲು ಉಳಿದ ಯುವಕರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಸರಗಳ್ಳತನ ಮಾಡಲು ಶುರು ಮಾಡಿದ್ದ ಎನ್ನಲಾಗಿದೆ.
ಒಂಟಿ ಮಹಿಳೆಯರೇ ಇವರ ಟಾರ್ಗೆಟ್:
ಈ ಖತರ್ನಾಕ್ ಗ್ಯಾಂಗ್ ಗ್ರಾಮೀಣ ಭಾಗದ ಜಮೀನುಗಳ ಬಳಿ ಒಂಟಿಯಾಗಿ ಓಡಾಡುವ ಹಾಗೂ ಕೆಲಸ ಮಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿತ್ತು. ಜನರಿಲ್ಲದ ಬಿಡುವು ನೋಡಿಕೊಂಡು ಬೈಕ್ನಲ್ಲಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಈ ಸಂಬಂಧ ಕಳೆದ ಮಾರ್ಚ್ 30 ರಂದು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರ ಭರ್ಜರಿ ಕಾರ್ಯಾಚರಣೆ:
ಸರಗಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಮಂಡ್ಯ ಎಸ್ಪಿ ಡಾ. ವಿ.ಜೆ. ಶೋಭಾರಾಣಿ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಎಎಸ್ಪಿ ತಿಮ್ಮಯ್ಯ ಹಾಗೂ ಸಿಪಿಐ ಶ್ರೀಧರ್ ನೇತೃತ್ವದಲ್ಲಿ, ಕಿರುಗಾವಲು ಪಿಎಸ್ಐ ರವಿಕುಮಾರ್, ಬೆಳಕವಾಡಿ ಪಿಎಸ್ಐ ಪ್ರಕಾಶ್ ಹಾಗೂ ಸಿಬ್ಬಂದಿಗಳಾದ ಸುನೀಲ್, ಸಿದ್ದಣ್ಣ, ಹರ್ಷ, ಜಯಂತ್, ಲೋಕೇಶ್ ಒಳಗೊಂಡ ತಂಡ ಹಗಲಿರುಳು ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.
16 ಪ್ರಕರಣಗಳು ಪತ್ತೆ, 70 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ:
ಬಂಧಿತ ಆರೋಪಿಗಳಿಂದ ಬರೋಬ್ಬರಿ 70 ಲಕ್ಷ ರೂಪಾಯಿ ಮೌಲ್ಯದ 475 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಖದೀಮರ ಬಂಧನದಿಂದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 16 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಕಳ್ಳರ ಜಾಲವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ ಕಿರುಗಾವಲು ಪೊಲೀಸರ ಸಾಹಸಿಕ ಕಾರ್ಯಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ವಿ.ಜೆ. ಶೋಭಾರಾಣಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.








