ಹುಬ್ಬಳ್ಳಿ : ಕಳೆದ ಏಪ್ರಿಲ್ 13 ರಂದು ಹುಬ್ಬಳ್ಳಿಯಲ್ಲಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ಎನ್ಕೌಂಟರ್ ನಲ್ಲಿ ಬಲಿಯಾಗಿದ್ದ ಬಿಹಾರ್ ಮೂಲದ ರಿತೇಶ್ ಕುಮಾರನ ಅಂತ್ಯ ಸಂಸ್ಕಾರ ಕೋರ್ಟ್‌ನ ನಿರ್ದೇಶನದಂತೆ ಇಂದು ಮಧ್ಯಾಹ್ನ ಇಲ್ಲಿನ ಬಿಡ್ನಾಳದ ರುದ್ರಭೂಮಿಯಲ್ಲಿ ನೇರವೇರಿತು.
ರಿತೇಶ ಕುಮಾರ ಏ. 13ರಂದು ಬಾಲಕಿಯ ಮೇಲೆ ಪೈಶಾಚಿಕ ಕೃತ್ಯವೆಸಗಿ ಹತ್ಯೆ ಮಾಡಿದ್ದ. ಇದೇ ವಿಚಾರವಾಗಿ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆಗೆ ಕರೆದೊಯ್ದಿದ್ದಾಗ ಅವರ ಮೇಲೆ ಕಲ್ಲೆಸೆದು ಪರಾರಿಯಾಗಲು ಯತ್ನಿಸಿದ್ದ. ಆಗ ಪೊಲೀಸರು ಗುಂಡು ಹೊಡೆದಾಗ ಮೃತಪಟ್ಟಿದ್ದ. ಆತನ ಕುಟುಂಬಸ್ಥರು, ಸಂಬಂಧಿಕರ ಪತ್ತೆಗಾಗಿ ಪೊಲೀಸರು ಕಳೆದ 22 ದಿನಗಳಿಂದ ಬಿಹಾರ ಸೇರಿದಂತೆ ದೇಶದ ಇತರೆಡೆ ಹುಡುಕಾಟ ನಡೆಸಿದ್ದರು. ಆದರೆ, ಪತ್ತೆಯಾಗಿರಲಿಲ್ಲ. ಈ ಪ್ರಕರಣದ ತನಿಖೆಯನ್ನು ಸರ್ಕಾರವು ಸಿಐಡಿ ವಹಿಸಿದೆ.
ಈತನ್ಮಧ್ಯೆ ಎನ್‌ಕೌಂಟರ್ ಗೆ ಸಂಬಂಧಿಸಿ ಬೆಂಗಳೂರಿನ ಹೈಕೋರ್ಟ್ ನಲ್ಲಿ ಓರ್ವರು ಪಿಐಎಲ್ ಸಲ್ಲಿಸಿದ್ದರಿಂದ, ಕೋರ್ಟ್ ಪ್ರಕರಣದ ಸಾಕ್ಷಿಗಾಗಿ ರಿತೇಶನ ಶವವನ್ನು ದಹನ ಮಾಡದೆ ಹೂಳಬೇಕೆಂದು ನಿರ್ದೇಶನ ನೀಡಿತ್ತು. ಜೊತೆಗೆ ಮೃತನ ವಾರಸುದಾರರು ಪತ್ತೆಯಾಗದ ಹಿನ್ನೆಲೆ ಮತ್ತು ಶವವು ಕೊಳೆಯುತ್ತಿದ್ದರಿಂದ ಕೆಎಂಸಿಆರ್‌ಐ ಶವಾಗಾರದ ಶಿಥಿಲ ಗೃಹದಲ್ಲಿ ಇಡಲಾಗಿದ್ದ ರಿತೇಶನ ಶವವನ್ನು ಶನಿವಾರ ತನಿಖಾಧಿಕಾರಿಗಳ ಸಮ್ಮುಖದಲ್ಲಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದರು.