ಶಿವಮೊಗ್ಗ: ಎರಡು ದಿನಗಳ ಹಿಂದಷ್ಟೇ ಕುಂದಾಪುರ ಮೂಲದ ಯುವಕನ ಜೊತೆಗೆ ಶ್ವೇತಾ ನಿಶ್ಚಿತಾರ್ಥವಾಗಿತ್ತು. ಸಾಗರದ ಮೂರುಕೈ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ನಡೆದಂತ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ, ಕೆಲಸದ ಕಾರಣ ಹುಬ್ಬಳ್ಳಿಯ ಬಾದಾಮಿ ಹತ್ತಿರದ ಕುಳಗೇರಿ ಕ್ರಾಸ್ ಗೆ ತೆರಳುತ್ತಿದ್ದಂತ ಸಾಗರದ ಮೂರುಕೈನ ಐವರು ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಾಗರ ತಾಲ್ಲೂಕಿನ ಮೂರುಕೈ ಗ್ರಾಮದ ವಿಠಲ್ ಹಾಗೂ ಶಶಿಕಲಾ ದಂಪತಿಗಳ ಪುತ್ರಿ ಶ್ವೇತಾ ಅವರ ನಿಶ್ಚಿತಾರ್ಥವು ಕಳೆದ ಎರಡು ದಿನಗಳ ಹಿಂದೆ ಕುಂದಾಪುರ ಮೂಲದ ಯುವಕನೊಂದಿಗೆ ನಡೆದಿತ್ತು. ನಿಶ್ಚಿತಾರ್ಥ ಮುಗಿಸಿದ ನಂತ್ರ, ಬಾದಾಮಿಯ ಕುಳುಗೇರಿ ಕ್ರಾಸ್ ಹತ್ತಿರ ಹೋಟೆಲ್ ಮಾಡಿಕೊಂಡಿರುವಂತ ಅಣ್ಣನ ಪುತ್ರನೊಂದಿಗೆ ಕೆಲಸ ಮಾಡಿಕೊಂಡಿದ್ದಂತ ವಿಠಲ್ ಮತ್ತು ಶಶಿಕಲಾ ದಂಪತಿಗಳು ಪುತ್ರಿ ಶ್ವೇತಾ, ಪುತ್ರ ಸಂದೀಪ್ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದರು.
ಹುಬ್ಬಳ್ಳಿಯ ಕುಸುಗಲ್ ಸಮೀಪದ ಇಂಗಳಹಳ್ಳಿ ಕ್ರಾಸ್ ಬಳಿಯಲ್ಲಿ ಇಂದು ಬೆಳಗ್ಗೆ ಲಾರಿ ಹಾಗೂ ಕಾರಿನ ನಡುವೆ ನಡೆದಂತ ಅಪಘಾತದಲ್ಲಿ ಸಾಗರದ ಮೂರುಕೈನ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಶ್ವೇತಾ (29), ಅಂಜಲಿ (26), ಸಂದೀಪ್ (26), ವಿಠ್ಠಲ (55), ಶಶಿಕಲಾ (40) ಎಂಬುದಾಗಿ ಗುರುತಿಸಲಾಗಿದೆ.
ಮೃತ ಅಂಜಲಿ ವಿಠಲ್ ಅವರ ಅಣ್ಣನ ಮಗಳಾಗಿದ್ದು, ನರಗುಂದದಲ್ಲಿ ವಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಶ್ವೇತಾ ತಮ್ಮ ಸಂದೀಪ್ ಕಾರು ಚಲಾಯಿಸುತ್ತಿದ್ದರು. ಇಂದು ನಡೆದಂತ ಅಪಘಾತದಲ್ಲಿ ಒಂದೇ ಕುಟುಂಬದ ತಂದೆ ವಿಠಲ್, ತಾಯಿ ಶಶಿಕಲಾ, ಪುತ್ರಿ ಶ್ವೇತಾ ಹಾಗೂ ಪುತ್ರ ಸಂದೀಪ್ ಸಾವನ್ನಪ್ಪಿದ್ದರೇ, ಅಣ್ಣನ ಮಗಳಾದಂತ ಅಂಜಲಿ ಕೂಡ ಮೃತರಾಗಿದ್ದಾರೆ.
ಈ ಸಂಬಂಧ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಪಾರ್ಥೀವ ಶರೀರವನ್ನು ಸಾಗರದ ಮೂರುಕೈ ಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ಮಾಡುವುದಾಗಿ ವಿಠಲ್ ಅವರ ಅಣ್ಣನ ಮಗ ಪ್ರಶಾಂತ್ ಅವರು ಕನ್ನಡ ನ್ಯೂಸ್ ನೌಗೆ ಮಾಹಿತಿ ನೀಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BREAKING: ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷ ರೂ.ಗಳ ನಗದು ರಹಿತ ಚಿಕಿತ್ಸಾ ಯೋಜನೆಗೆ ಕೇಂದ್ರ ಸರ್ಕಾರ ಅಧಿಸೂಚನೆ
“ರೈಲು ಬೋಗಿಯಂತೆ ಮೀಸಲಾತಿ…”: ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಮಹತ್ವದ ಹೇಳಿಕೆ…!