ಹುಬ್ಬಳ್ಳಿ : ಕಳೆದ ಮೇ ತಿಂಗಳಿನಲ್ಲಿ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ಅಂಜಲಿ ಅಂಬಿಗೇರ್ ಎಂಬ ಯುವತಿಯ ಮನೆಗೆ ನುಗ್ಗಿ ಗಿರೀಶ್ ಅಲಿಯಾಸ್ ವಿಶ್ವ ಎಂಬ ಯುವಕ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ 494 ಪುಟಗಳ ಚಾರ್ಜ್ಶೀಟ್ನ್ನು ಹುಬ್ಬಳ್ಳಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಸಿಸಿಟಿವಿ, ಪ್ರತ್ಯಕ್ಷ ಸಾಕ್ಷಿ, ಹಂತಕನ ತಾಯಿ, ಗಿರೀಶ್ ಕೆಲಸ ಮಾಡ್ತಿದ್ದ ಹೊಟೆಲ್ ಸಿಬ್ಬಂದಿ ಸೇರಿ 85 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಗಿರೀಶ್ನಿಂದ ಅಂಜಲಿ ದೂರವಾಗಿದ್ದಕ್ಕೆ ಕೊಲೆ ಎಂದು ಉಲ್ಲೇಖ ಮಾಡಲಾಗಿದೆ.
ಆರೋಪಿ ಗಿರೀಶ್ ಮೈಸೂರಿನ ಮಹಾರಾಜ ಹೋಟೆಲ್ ಆವರಣದ ಎಂಎಸ್ಸಿ ಪಬ್ ಆ್ಯಂಡ್ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ. ಗಿರೀಶ್ ಕೆಲಸ ಮಾಡುವ ಸಮಯದಲ್ಲಿಯೇ 3 ರಿಂದ 4 ಬಾರಿ ಅಂಜಲಿ, ಗಿರೀಶ್ ಭೇಟಿಗೆ ತೆರಳಿದ್ದರು. 2024 ರ ಎಪ್ರೀಲ್ನಲ್ಲಿ ಇಬ್ಬರ ನಡುವೆ ಮನಸ್ತಾಪವಾಗಿದೆ. ಈ ವೇಳೆ ಗಿರೀಶ್ ಕರೆಯನ್ನು ಅಂಜಲಿ ಸ್ವೀಕರಿಸಿಲ್ಲ. ಇದಲ್ಲದೆ ಅಂಜಲಿ ಗಿರೀಶ್ ನಂಬರ್ ಬ್ಲಾಕ್ ಮಾಡಿದ್ದಳು. ಹೀಗಾಗಿ ಅಂಜಲಿ ಮನೆಗೆ ಬಂದು ಕೊಲೆ ಮಾಡಿದ್ದಾನೆಂದು ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ.