ಬೆಂಗಳೂರು: ವಾಹನಗಳಿಗೆ ಹೈಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ನೀಡಲಾಗಿರುವ ಗಡುವನ್ನು ಮತ್ತೆ ವಿಸ್ತರಣೆ ಮಾಡುವ ಅವಕಾಶ ಇಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಕಳೆದ ವರ್ಷ ನವೆಂಬರ್ ಮತ್ತು ಈ ಫೆಬ್ರವರಿಯಲ್ಲಿ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ಗಡುವನ್ನು ವಿಸ್ತರಿಸಿದ್ದು ಇನ್ನು ಮುಂದೆ ಆದನ್ನು ವಿಸ್ತರಿಸಲು ಚಿಂತನೆ ನಡೆಸಿಲ್ಲ ಎಂದು ವರದಿಯಾಗಿದೆ.
2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಎರಡು ಗಡುವಿನ ವಿಸ್ತರಣೆಗಳ ಹೊರತಾಗಿಯೂ, ರಾಜ್ಯದಲ್ಲಿ ಕೇವಲ 34 ಲಕ್ಷ ಎಚ್ಎಸ್ಆರ್ಪಿಗಳು ಮಾತ್ರ ನೋಂದಾಯಿಸಲ್ಪಟ್ಟಿವೆ. ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ) ಸಿ.ಮಲ್ಲಿಕಾರ್ಜುನ ಮಾತನಾಡಿ, ಫೆಬ್ರವರಿಯಿಂದ ಸುಮಾರು 18 ಲಕ್ಷ ನೋಂದಣಿಗಳು ನಡೆದಿವೆ ಮತ್ತು ಹೆಚ್ಚಿನ ವಾಹನಗಳು ಇನ್ನೂ ಎಚ್ಎಸ್ಆರ್ಪಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
ಕರ್ನಾಟಕದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಾಯಿಸಿದ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರು, ಮಧ್ಯಮ, ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್ & ಟ್ರ್ಯಾಕ್ಟರ್‌ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದು ಕಡ್ಡಾಯ. ರಾಜ್ಯ ಸರ್ಕಾರವು ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ಮೇ.31ರವರೆಗೆ ಅವಕಾಶ ನೀಡಿದೆ.
ರಾಜ್ಯ ಸಾರಿಗೆ ಇಲಾಖೆ ಮೇ. 31ರವರೆಗೆ ಎಚ್ ಎಸ್ ಆರ್ ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಸ ನೀಡಿದೆ. ಅದಾದನಂತರ ಜೂ. 1 ರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವಧಿಯೊಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಿರುವ ಸುಮಾರು 2 ಕೋಟಿ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನ, ಪ್ರಯಾಣಿಕ ಕಾರುಗಳು, ಮಧ್ಯಮ, ಭಾರಿ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್‌ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.
ಎಚ್‌ಎಸ್‌ಆರ್‌ಪಿ ಅಳವಡಿಸದಿದ್ರೆ ವಾಹನ ಮಾಲೀಕತ್ವ, ವಿಳಾಸ ವರ್ಗಾವಣೆ, ಕಂತು ಕರಾರು ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಸೇವೆಗೆ ಅನುಮತಿ ಇರುತ್ತಿರಲಿಲ್ಲ. ಹಾಗೇ ಇದರ ಜೊತೆ ಭಾರಿ ಪ್ರಮಾಣದ ದಂಡ ಕೂಡ ಮಾರ್ಗಸೂಚಿ ಪಾಲಿಸದ ವಾಹನ ಮಾಲೀಕರಿಗೆ ತಟ್ಟುತ್ತಿತ್ತು.