ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದ್ದು, ತನ್ನ ಮೂರು ವರ್ಷದ ಮೊಮ್ಮಗನಿಗೆ ಅಜ್ಜನೇ ಸಾರಾಯಿ ಕುಡಿಸಿದ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ಪಟ್ಟಣದ ಬಾರ್‌ವೊಂದರಲ್ಲಿ ನಡೆದಿದೆ. ಮಗುವಿನ ಎದುರು ತಾನೂ ಸಾರಾಯಿ ಕುಡಿದ ದ್ದಲ್ಲದೆ ಎಳೆ ವಯಸ್ಸಿನ ಮೊಮ್ಮಗನಿಗೂ ಸಾರಾಯಿಯ ರುಚಿ ತೋರಿಸಿದ್ದಕ್ಕೆ ವೃದ್ಧನ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ರಾತ್ರಿ ರಾಯಭಾಗ ಪಟ್ಟಣದ ಬಾರ್‌ಗೆ ತನ್ನ ಮೂರು ವರ್ಷದ ಮೊಮ್ಮಗ ನೊಂದಿಗೆ ಆಗಮಿಸಿದ ವ್ಯಕ್ತಿ, ಆತನ ಎದುರು ತಾನೂ ಕುಡಿದದ್ದಲ್ಲದೆ, ಮಗುವಿಗೂ ಸಾರಾಯಿ ಕುಡಿಸಿದ್ದಾನೆ. ಆ ವೇಳೆ, ಸ್ಥಳೀಯರು ಕುಡಿಸೋದು ಬೇಡ, ಬೇಡ ಎಂದರೂ ಅವರ ಮಾತಿಗೆ ಬೆಲೆ ಕೊಡದೆ, ತಾನೇ ಗ್ಲಾಸ್ ನಲ್ಲಿ ಸರಾಯಿ ಹಾಕಿಕೊಟ್ಟಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಾರ್‌ಮತ್ತು ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಬಕಾರಿ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆಯೇ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.








