ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಪ್ರೀತ್ಸೆ, ಪ್ರೀತ್ಸೆ ಎಂದು ಬೆನ್ನು ಬಿದ್ದು ಕಾಡುತ್ತಿದ್ದ ಪಾಗಲ್ ಪ್ರೇಮಿಯ ಹುಚ್ಚಾಟದಿಂದ ಕಂಗೆಟ್ಟು ಮಾನಸಿಕವಾಗಿ ನೊಂದ ಯುವತಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂದಿರುವ ಘಟನೆ ಖಾನಾಪುರದ ದೇವಲತ್ತಿ ಗ್ರಾಮದಲ್ಲಿ ನಡೆದಿದೆ.
ಅಶ್ವಿನಿ ಕೋಲಕಾರ (17) ಎಂಬುವಳೇ ಮೃತ ದುರ್ದೈವಿ. ನಂದಳಿ ಗ್ರಾಮದ ರತನ ಪಾಟೀಲ(26) ಎಂಬ ಯುವಕನಿಗೆ ದೇವಲತ್ತಿ ಗ್ರಾಮದ ತನಗಿಂತಲೂ 10 ವರ್ಷ ಚಿಕ್ಕ ವಯಸ್ಸಿನ ಈಕೆ ಮೇಲೆ ಮನಸ್ಸಾಗಿದೆ. ಆಕೆಗೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ ಅವನ ಪ್ರೀತಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಇದರಿಂದ ಕೆರಳಿದ ಆತ ಆಕೆಯನ್ನು ಫಾಲೋ ಮಾಡಿ ಬಂದು ಸತಾಯಿಸುವುದಕ್ಕೆ ಶುರು ಮಾಡಿದ್ದಾನೆ.
ಕಳೆದೊಂದು ವರ್ಷದಿಂದಲೂ ಇದೇ ನಡೆದಿತ್ತು. ನೀನು ನನ್ನನ್ನು ಒಪ್ಪಿಕೊಳ್ಳಲೇಬೇಕು. ನಾನು ಕರೆದಲ್ಲಿಗೆ ಬರಬೇಕು. ನನ್ನೊಂದಿಗೆ ಸಹಕರಿಸಬೇಕು ಎಂದು ಒತ್ತಾಯಿಸಲು ಶುರು ಮಾಡಿದ್ದಾನೆ. ಒಪ್ಪದೆ ಇದ್ದಾಗ ನಮ್ಮಿಬ್ಬರ ನಡುವೆ ಸಂಬಂಧವಿದೆ ಎಂದು ಎಲ್ಲರಿಗೂ ಹೇಳುತ್ತೇನೆ ಎಂದು ಧಮ್ಮಿ ಹಾಕಿದ್ದಾನೆ.
ನಿರಂತರ ಕಿರುಕುಳದಿಂದ ಮಾನಸಿಕವಾಗಿ ನೊಂದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಸೀರೆಯಿಂದ ನೇಣು ಬಿಗಿದು ಸಾವಿಗೆ ಶರಣಾದಳು. ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.