ಚಿತ್ರದುರ್ಗ : ಮೈಸೂರು ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಿದ್ದಾರೆ ಎಂದು ಸಿಎಂ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ಹಿರಿಯೂರು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ. ಅಭಿನಂದನ್ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೇಳಿಕೆ ಬಿಡುಗಡೆ ಮಾಡಿರುವ ಅಭಿನಂದನ್ ಅವರು ಸಿಎಂ ಮಗ ಎಂಬ ಕಾರಣಕ್ಕೆ ಮನಸಿಗೆ ತೋಚಿದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಅಧಿಕಾರದಲ್ಲಿ ಇದ್ದೇವೆಂದು ಪ್ರಚಾರದ ಹೇಳಿಕೆಗಳು ನೀಡುವುದು ಸರಿಯಲ್ಲ ಎಂದಿದ್ದಾರೆ.
ಮೈಸೂರು ಮಹಾರಾಜ ಮನೆತನವನ್ನು ಇಡೀ ರಾಜ್ಯವೇ ಮೆಚ್ಚಿಕೊಂಡಿದೆ. ದಕ್ಷಿಣ ಭಾರತದಲ್ಲಿ ಮೈಸೂರಿನ ಮಹಾರಾಜರು 1399 ರಿಂದ 1947ರವಗೆ ಆಡಳಿತ ನಡೆಸಿದ್ದಾರೆ. ಅದರಲ್ಲೂ 1894 ರಿಂದ 1940ರ ವರೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಿಕ್ಕ ವಯಸ್ಸಿನಲ್ಲೇ ಆಡಳಿತ ನಡೆಸಿ, ಮಾದರಿಯಾಗಿದ್ದರು. ಅವರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನವು ಅನೇಕ ಪ್ರಗತಿಗಳನ್ನು ಕಂಡಿತು. ಶಿಕ್ಷಣ, ಕೈಗಾರಿಕೆ, ನೀರಾವರಿ, ಬ್ಯಾಂಕಿಂಗ್, ಸಹಕಾರ, ಕಲೆ, ಸಾಹಿತ್ಯ, ಸಂಸ್ಕೃತಿ, ರಸ್ತೆ, ಮತ್ತು ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಯಿತು. ಅವರ ಆಡಳಿತವನ್ನು “ರಾಜರ್ಷಿ” ಎಂದು ಕರೆಯಲಾಯಿತು, ಇದು ಮಹಾತ್ಮ ಗಾಂಧೀಜಿಯವರಿಂದ ನೀಡಲ್ಪಟ್ಟಿತು, ಅವರ ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾಧನೆಗಳಿಗಾಗಿ.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತನ್ನ ಮನೆತನದ ಒಡವೆಗಳನ್ನು ಅಡವಿಟ್ಟು ಕೆಆರ್. ಎಸ್ ಅಣೆಕಟ್ಟು ಮತ್ತು ಹಿರಿಯೂರಿನ ವಾಣಿ ವಿಲಾಸ ಜಲಾಶಯವನ್ನು ನಿರ್ಮಾಣ ಮಾಡಿ, ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಆಭರಣಗಳನ್ನು ಅಡವಿಟ್ಟು ರಾಜ್ಯದ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬುದನ್ನು ಯತೀಂದ್ರ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ತಿಳಿಸಬೇಕು. ಕೂಡಲೇ ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರು ಮನೆತನದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.