ಬೆಂಗಳೂರು: ಕಳೆದ ವರ್ಷ ಧಾರ್ಮಿಕ ದತ್ತಿ ಇಲಾಖೆಗೆ ನಮ್ಮ ಸರಕಾರ 250 ಕೋಟಿ ರೂ. ನೀಡಿದೆ ಎಂದು ವಿವರಿಸಿದರು. ಆದರೆ, ಕಾಂಗ್ರೆಸ್ ಸರಕಾರವು ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನು ಕಡೆಗಣಿಸಿದ್ದು, 50 ಕೋಟಿಯನ್ನೂ ಕೊಟ್ಟಿಲ್ಲ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ನೋವಿನಿಂದ ನುಡಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಚಕರಿಗೆ ತಪ್ಪು ಮಾಹಿತಿ ಕೊಡಲಾಗಿದೆ. ಅವರು ಪತ್ರಿಕಾಗೋಷ್ಠಿ ಮಾಡುವಂತಾಗಿದೆ. ಅರ್ಚಕರಿಗೆ ಮನೆ ಕೊಟ್ಟದ್ದು ನಮ್ಮ ಸರಕಾರ. ತಸ್ತೀಕ್ ತಂದದ್ದು ನಮ್ಮ ಸರಕಾರ. ಅದನ್ನು 48 ಸಾವಿರಕ್ಕೆ ಏರಿಸಿದ್ದು ನಮ್ಮ ಸರಕಾರ ಎಂದು ವಿವರ ನೀಡಿದರು.
ಇದೆಲ್ಲವನ್ನು ಜನರು ಅರ್ಥ ಮಾಡಿಕೊಳ್ಳಬೇಕು. ದೇವಸ್ಥಾನದ ಒಟ್ಟು ಆದಾಯದಿಂದ ಶೇ 10 ಪಡೆಯುವ ಮಸೂದೆ ಜಾರಿಗೆ ಮುಂದಾದುದರಿಂದ ದೇವಸ್ಥಾನದ ಒಟ್ಟು ಆರ್ಥಿಕ ವ್ಯವಸ್ಥೆ ಕುಸಿಯಬಾರದೆಂಬ ಕಾರಣಕ್ಕೆ ವಿರೋಧಿಸಿದ್ದೇವೆ. ಆದರೆ, ಬಿಜೆಪಿಯವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ತುಂಬ ದೇವಸ್ಥಾನಗಳಲ್ಲಿ ಶಾಲೆ, ಗೋಶಾಲೆ ನಡೆಸುತ್ತಿದ್ದಾರೆ; ಮಧ್ಯಾಹ್ನದ ಅನ್ನ ಪ್ರಸಾದ, ಸಪ್ತಪದಿ (ಮದುವೆ) ವ್ಯವಸ್ಥೆ ಇದೆ ಎಂದರು.
ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿ ಮೊನ್ನೆ ದೇಗುಲಗಳ ಮಸೂದೆಯನ್ನು ಬಿಜೆಪಿ- ಜೆಡಿಎಸ್ ಸದಸ್ಯರು ವಿರೋಧಿಸಿದ್ದಾರೆ. ‘ನಾವು ಅರ್ಚಕರಿಗೆ- ದೇವಾಲಯಗಳಿಗೆ ಒಳ್ಳೆಯದು ಮಾಡಲು ಹೊರಟಿದ್ದೆವು. ಆದರೆ, ಬಿಜೆಪಿ ಇದನ್ನು ವಿರೋಧಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಹಿರಿಯ ಸಚಿವ ಎಚ್.ಕೆ.ಪಾಟೀಲ್, ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರು ಆರೋಪಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ವಾಸ್ತವಿಕವಾಗಿ ದೇವಾಲಯಗಳ ಅಭಿವೃದ್ಧಿಗಾಗಿ ತಿದ್ದುಪಡಿ ತಂದು 33,500 ದೇವಸ್ಥಾನಗಳಿಗೆ ತಸ್ತೀಕ್ ಕೊಡುವ ಯೋಜನೆ ರೂಪಿಸಿದ್ದೇ ಬಿಜೆಪಿ ಎಂದು ವಿವರಿಸಿದರು.
ಯಡಿಯೂರಪ್ಪ ಅವರ ಮುಖ್ಯಮಂತ್ರಿಯಾಗಿದ್ದು, ನಾಗರಾಜ ಶೆಟ್ಟಿಯವರು ಸಚಿವರಾಗಿದ್ದಾಗ ತಸ್ತೀಕ್ ಎಂಬ ಯೋಜನೆಯನ್ನು ನಮ್ಮ ಸರಕಾರ ಜಾರಿಗೊಳಿಸಿತ್ತು. ಆಗ ತಸ್ತೀಕ್ 6,500 ರೂ ಇತ್ತು. 33,500 ದೇವಸ್ಥಾನಗಳಿಗೂ ಅದನ್ನು ಕೊಡುತ್ತಿದ್ದೆವು. ವಿ.ಎಸ್.ಆಚಾರ್ಯರು ಸಚಿವರಿದ್ದಾಗ ಅದನ್ನು 12 ಸಾವಿರ ಮಾಡಿದ್ದು, ನಾನು ಧಾರ್ಮಿಕ ದತ್ತಿ ಸಚಿವನಾದಾಗ 24 ಸಾವಿರಕ್ಕೆ ಏರಿಸಿದ್ದೆ. ನಮ್ಮದೇ ಸರಕಾರ ಇದ್ದಾಗ 48 ಸಾವಿರಕ್ಕೆ ಏರಿಸಿದ್ದು, ಈಗ ಅದು 60 ಸಾವಿರ ಆಗಿದೆ ಎಂದು ವಿವರ ನೀಡಿದರು. ಬಡ ದೇವಸ್ಥಾನಗಳಿಗೆ ಅನುಕೂಲ ಆಗಲಿ ಎಂದು ಅದನ್ನು 1 ಲಕ್ಷಕ್ಕೆ ಏರಿಸಲು ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾನು ಸಚಿವನಾಗಿದ್ದಾಗ ಅರ್ಚಕರಿಗೆ ಪಿಂಚಣಿ, ಆರೋಗ್ಯ ವಿಮೆ, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಅರ್ಚಕರ ಮನೆ ಪ್ರಸ್ತಾಪ ಮುಂದಿಟ್ಟಿದ್ದು, ಅರ್ಚಕರ ಮನೆ ಮಂಜೂರು ಮಾಡಿದ್ದೇವೆ. ಭಕ್ತರು ಹುಂಡಿಗೆ ಹಾಕಿದ ಹಣ, ಭಕ್ತರ ಸೇವೆಯಿಂದ 1 ಕೋಟಿ ಆದಾಯದಿಂದ 90 ಲಕ್ಷ ದೇವಾಲಯಕ್ಕೆ ಖರ್ಚು ಮಾಡಿ, ಉಳಿದ 10 ಲಕ್ಷದಲ್ಲಿ 10 ಶೇ ಎಂದರೆ 1 ಲಕ್ಷ ಸರಕಾರಕ್ಕೆ ಬರುತ್ತಿತ್ತು. ಈಗ ತಿದ್ದುಪಡಿಯಲ್ಲಿ ಮೂಲ ಆದಾಯದಲ್ಲಿ ಶೇ 10 (10 ಲಕ್ಷ) ಪಡೆಯಲು ತಿದ್ದುಪಡಿ ಮಾಡಿದ್ದಾರೆ. ಇದನ್ನು ವಿರೋಧಿಸಿದ್ದೇವೆ ಎಂದರು.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ 100 ಕೋಟಿ ಆದಾಯವಿದ್ದರೆ 10 ಕೋಟಿಯನ್ನು ಧಾರ್ಮಿಕ ದತ್ತಿ ಇಲಾಖೆಗೆ ಕೊಡಬೇಕಾಗುತ್ತದೆ. ನಿರ್ವಹಣಾ ವೆಚ್ಚ ತೆಗೆದ ನಂತರ ನಿವ್ವಳ ಉಳಿಕೆಯಲ್ಲಿ ಶೇ 10 ಪಡೆಯಬೇಕೆಂದು ನಮ್ಮ ಒತ್ತಾಯವಿತ್ತು. ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಅಧಿಕಾರ ಎ ದರ್ಜೆಯ ದೇವಸ್ಥಾನಕ್ಕೆ ಧಾರ್ಮಿಕ ಪರಿಷತ್ ಮಾಡುತ್ತದೆ. ಬಿ, ಸಿ ದೇವಸ್ಥಾನಗಳಿಗೆ ಜಿಲ್ಲಾ ಧಾರ್ಮಿಕ ಪರಿಷತ್ ಮಾಡುತ್ತದೆ. ಧಾರ್ಮಿಕ ಪರಿಷತ್ ಮೂಲಕ ಸದಸ್ಯರ ಆಯ್ಕೆ ಮಾಡಿದ ನಂತರ ಅಧ್ಯಕ್ಷರನ್ನು ಅವರೇ ಆಯ್ಕೆ ಮಾಡಬೇಕು. ರಾಮಲಿಂಗಾರೆಡ್ಡಿಯವರ ಬಿಲ್‍ನಲ್ಲಿ ಧಾರ್ಮಿಕ ಪರಿಷತ್ತಿನ ಮೂಲಕ ವ್ಯವಸ್ಥಾಪನ ಸಮಿತಿ, ಅಧ್ಯಕ್ಷರನ್ನು ಸರಕಾರವೇ ಆಯ್ಕೆ ಮಾಡುತ್ತದೆ. ಇದನ್ನು ವಿರೋಧಿಸಿದ್ದೇವೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರರು ‘ನಾವು ಅರ್ಚಕರಿಗೆ ಒಳ್ಳೆಯದು ಮಾಡಲು ಹೋದೆವು. ಆದರೆ, ಬಿಜೆಪಿಯವರು ಅಡ್ಡ ಹಾಕಿದ್ದಾರೆ. ಮೇಲ್ಮನೆಯಲ್ಲಿ 3 ತಿಂಗಳಲ್ಲಿ ಬಹುಮತ ಬರಲಿದೆ. ಆಗ ನಾವು ತರುತ್ತೇವೆ’ ಎಂದು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರು ಬಿಜೆಪಿಯವರು ತಪ್ಪು ಮಾಡುತ್ತಿದ್ದಾರೆ; ನಾವು ಒಳ್ಳೆಯದು ಮಾಡಿದರೆ ಇವರು ಕೆಟ್ಟದು ಮಾಡುತ್ತಾರೆ ಎಂದು ಪ್ರಥಮ ಬಾರಿಗೆ ದೇವರ ಪರ ಮಾತನಾಡಿದ್ದಾರೆ. ಚರ್ಚೆ ಮಾಡಿ ಅನುಮೋದಿಸಲು ಒತ್ತಾಯಿಸಿದ್ದೇವೆ. ಆದರೆ, ಡಿಕೆಶಿ ಅವರು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ನಿವ್ವಳ ಉಳಿಕೆಯಲ್ಲಿ ಹಣ ಪಡೆಯಲು ತಿಳಿಸಿದೆವು. ವ್ಯವಸ್ಥಾಪನಾ ಸಮಿತಿಯಲ್ಲಿ ಅಧ್ಯಕ್ಷರ ಆಯ್ಕೆ ಸರಿಯಲ್ಲ ಎಂದಿದ್ದೇವೆ. ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ ಅವರಂಥ ಹಿರಿಯರು ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಒಳ್ಳೆಯ ಸಲಹೆಗೆ ಬೆಲೆ ಕೊಡುತ್ತಾರೆಂದು ಭಾವಿಸಿದ್ದೆವು. ಆದರೆ, ಸರಕಾರ ಹಠಮಾರಿತನದ ಧೋರಣೆ ಅನುಸರಿಸಿದೆ ಎಂದು ಹೇಳಿದರು.
ತಿದ್ದುಪಡಿಯನ್ನು ಮತ್ತೊಮ್ಮೆ ಚರ್ಚೆ ಮಾಡಿ ಎಂದು ತಿರಸ್ಕಾರ ಮಾಡಿದ್ದೇವೆ. ಅರ್ಚಕರ ಪರವಾಗಿರುವ ನಮ್ಮ ಒಟ್ಟು ನಿಲುವಿನ ಕುರಿತು ದಾರಿ ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯ, ಡಿಕೆಶಿ ಮತ್ತು ಇತರರು ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮಾತನಾಡಿ, 35 ಸಾವಿರ ಅರ್ಚಕರ ಮನೆಗೆ 15 ಕೋಟಿ, ಸ್ಕಾಲರ್‍ಶಿಪ್‍ಗೆ 5 ಕೋಟಿ, 5 ಕೋಟಿಯಲ್ಲಿ ವಿಮೆ ಮಾಡಿಸುವುದಾಗಿ ಹೇಳಿದ್ದಾರೆ. ನೀವು ಕ್ರಿಶ್ಚಿಯನ್ನರು, ಮುಸ್ಲಿಮರಿಗೆ 300 ಕೋಟಿ ಕೊಟ್ಟಿದ್ದೀರಿ. 35 ಸಾವಿರ ದೇವಸ್ಥಾನಗಳಿಗೆ 300 ಕೋಟಿ ಕೊಡಬೇಕಿತ್ತು ಎಂದು ಹೇಳಿದರು. ಹಿಂದೂ ದೇವಾಲಯ ಎಂದರೆ ಇಷ್ಟು ಕನಿಷ್ಠವೇ ಎಂದು ಪ್ರಶ್ನಿಸಿದರು. ಹಿಂದೂಗಳ ವಿಚಾರ ಬಂದಾಗ ಶ್ರೀಮಂತ ದೇವಾಲಯದಿಂದ ಕಿತ್ತುಕೊಂಡು ಬೇರೆ ದೇವಾಲಯಕ್ಕೆ ಕೊಡಲು ನೀವೇ ಬೇಕೇ? ಎಂದು ಕೇಳಿದರು.
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಎಂದು ಘೋಷಿಸುವ ಸರಕಾರ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 1 ಸಾವಿರ ಕೋಟಿ ಎಂದು ಆದೇಶ ನೀಡಿದ ರಾಜ್ಯ ಕಾಂಗ್ರೆಸ್ ಸರಕಾರವು ಹಿಂದುಳಿದ, ಅತಿ ಕೆಳ ಸ್ಥಿತಿಯಲ್ಲಿರುವ ದೇವಸ್ಥಾನಗಳಿಗೆ 300 ಕೋಟಿ ಕೊಡಲು ಸಾಧ್ಯವಿಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ವಿಧಾನಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಪ್ರತಾಪಸಿಂಹ ನಾಯಕ್, ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಜಪಾನ್‌ನ ‘SLIM ಮೂನ್ ಲ್ಯಾಂಡರ್’ 2 ವಾರಗಳ ಚಂದ್ರನ ರಾತ್ರಿಯ ನಂತರ ‘ಮತ್ತೆ ಜೀವಂತ: ವಿಜ್ಞಾನಿಗಳಿಗೆ ಅಚ್ಚರಿ
6 ವಾರಗಳ ಹಿಂದೆ ನಾನು ‘ಲಘು ಪಾರ್ಶ್ವವಾಯು’ವಿಗೆ ತುತ್ತಾಗಿದ್ದೇನೆ – ‘ಜೆರೋಧಾ ಸಿಇಒ ನಿತಿನ್ ಕಾಮತ್’