ಬೆಂಗಳೂರು:ಕರ ಸೇವಕ ಶ್ರೀಕಾಂತ್ ಪೂಜಾರಿ ಬಂಧನವನ್ನು ಖಂಡಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಶಾಸಕ ಅರವಿಂದ ಬೆಲ್ಲದ್ ಮತ್ತು ನೂರಾರು ಬಿಜೆಪಿ ಕಾರ್ಯಕರ್ತರನ್ನು ಹುಬ್ಬಳ್ಳಿಯಲ್ಲಿ ಬುಧವಾರ ಪೊಲೀಸರು ಬಂಧಿಸಿದರು.
ಪೊಲೀಸ್ ಠಾಣೆ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೂಜಾರಿಯನ್ನು ಬಂಧಿಸಿದ ಇನ್ಸ್ ಪೆಕ್ಟರ್ ನನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಅವರನ್ನು ತಡೆದರು.
ಸಿದ್ದರಾಮಯ್ಯ ಸರ್ಕಾರದ ನಿರ್ದೇಶನದಂತೆ 31 ವರ್ಷಗಳ ಹಿಂದಿನ ಪ್ರಕರಣವನ್ನು ‘ಅಗೆದು’ ಅಮಾಯಕನನ್ನು ಬಂಧಿಸಲಾಗಿದೆ’ ಎಂದು ಅಶೋಕ ಆರೋಪಿಸಿದರು. “ರಾಮಮಂದಿರ ಶಂಕುಸ್ಥಾಪನೆ ಸಮಾರಂಭ ಹತ್ತಿರವಿರುವಾಗ ಕರಸೇವಕನನ್ನು ಬಂಧಿಸುವ ಅಗತ್ಯ ಏನಿತ್ತು. ಹಿಂದೂಗಳನ್ನು ಹೆದರಿಸಲು ಈ ರೀತಿ ಮಾಡಲಾಗುತ್ತಿದೆ.”ಎಂದು ಆರೋಪಿಸಿದ್ದಾರೆ.
‘ನಾವು ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ, ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡರೆ ಅವರು ಎದುರಿಸುವ ಪರಿಣಾಮಗಳ ಕುರಿತು ನಾವು ಸರ್ಕಾರಕ್ಕೆ ಬಲವಾದ ಸಂದೇಶವನ್ನು ಕಳುಹಿಸುತ್ತೇವೆ. ಬಂಧಿಸಿದ ಅಧಿಕಾರಿಯನ್ನು ಅಮಾನತು ಮಾಡಲು ಸರ್ಕಾರ ವಿಫಲವಾದರೆ ಜನವರಿ 9 ರಂದು ಹುಬ್ಬಳ್ಳಿಯಲ್ಲಿ ಪಕ್ಷವು ಬೃಹತ್ ಪ್ರತಿಭಟನೆ ನಡೆಸುತ್ತದೆ’’ ಎಂದು ಅಶೋಕ ಎಚ್ಚರಿಸಿದರು.
ರಾಮಮಂದಿರ ನಿರ್ಮಾಣದ ಬಗ್ಗೆ ಕಾಂಗ್ರೆಸ್‌ಗೆ ಹೊಟ್ಟೆಕಿಚ್ಚು ಇದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಆದ್ದರಿಂದ ಹಿಂದೂಗಳಿಗೆ ಬೆದರಿಕೆ ಹಾಕಲು ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ 10,000 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ 69,000 ಪ್ರಕರಣಗಳು ಬಾಕಿ ಉಳಿದಿರುವಾಗ ಅವರು ಇಲ್ಲಿ ಅಮಾಯಕರನ್ನು ಏಕೆ ಬಂಧಿಸಿದರು? ಎಂದು ಅವರು ಕೇಳಿದರು.
ಸಿದ್ದರಾಮಯ್ಯ ಅವರು ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಬೆಲ್ಲದ್, ಸರ್ಕಾರದ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ಬಂಧನ ಮಾಡಲಾಗಿದೆ ಎಂದರು.