ವಿಜಯಪುರ : ಹಿಜಾಬ್ ವಿವಾದದ ಕುರಿತು ನ್ಯಾಯಮೂರ್ತಿಗಳ ವಿಭಿನ್ನ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ (Supreme Court) ಹಿಜಾಬ್ ವಿವಾದವನ್ನು ಸಿಜೆಐ ಪೀಠಕ್ಕೆ ವರ್ಗಾವಣೆ ಮಾಡಿ ಆದೇಶಿಸಿದೆ. ಈ ಬಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ
ಹಿಜಾಬ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ನೀಡಿರುವ ಎರಡು ರೀತಿಯ ನಿರ್ಧಾರದಿಂದ ಪ್ರಕರಣ ವಿಸ್ತ್ರತ ಪೀಠಕ್ಕೆ ಹೋಗಿದೆ. ಸುಪ್ರೀಂ ಕೋರ್ಟ್ ವಿಸ್ತೃತ ಪೀಠ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯವೇ ಅಲ್ಲ. ಕುರಾನ್ ಧರ್ಮ ಗ್ರಂಥದಲ್ಲೂ ಉಲ್ಲೇಖವಿಲ್ಲದ ಹಿಜಾಬ್ ಹೆಸರಿನಲ್ಲಿ ಕೆಲವು ದೇಶ ದ್ರೋಹಿಗಳು ಆರು ಹೆಣ್ಣುಮಕ್ಕಳ ಮೂಲಕ ಷಡ್ಯಂತ್ರವಾಗಿದೆ ಮುಸ್ಲಿಂ ಮುಖಂಡರು ಆಗಲೇ ಬುದ್ದಿ ಹೇಳಿದ್ದರೆ ಪರಿಸ್ಥಿತಿ ಇಲ್ಲಿಗೆ ಬರುತ್ತಿರಲಿಲ್ಲ ಎಂದರು.
ಹೈಕೋರ್ಟ್ ತೀರ್ಪು ನೀಡಿದಾಗಲೇ ಮುಸ್ಲಿಂ ಮುಖಂಡರು ಆ ಆರು ಹೆಣ್ಣು ಮಕ್ಕಳಿಗೆ ಬೈದು ಬುದ್ದಿ ಹೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸದ್ಯ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ವಿಭಿನ್ನ ಅಭಿಪ್ರಾಯ ನೀಡಿದ್ದು ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಸಮಾನತೆಗೆ, ಸಂವಿಧಾನಕ್ಕೆ ಆದ್ಯತೆ ಕೊಡಬೇಕು. ಐದು ಅಥವಾ ಏಳು ಜನರ ನ್ಯಾಯಾಧೀಶರ ವಿಸ್ತೃತ ಪೀಠ ನೀಡುವ ತೀರ್ಪು ಏನಾಗಲಿದೆ ಎಂಬುದು ನೋಡಬೇಕು, ವಿಸ್ತೃತ ಪೀಠ ನೀಡುವ ತೀರ್ಪಿಗೆ ಎಲ್ಲರೂ ಬದ್ಧವಾಗಿರಬೇಕು ಎಂದರು.