ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾದನದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವುಕೋರಿ ಮಾರಿಕಾಂಬ ಹಿತರಕ್ಷಣಾ ಸಮಿತಿಯಿಂದ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್, ತಡೆಯಾಜ್ಞೆ ತೆರವುಗೊಳಿಸಿದ್ದು, ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ಆರಂಭಗೊಂಡಿತ್ತು. ಆ ಸಂದರ್ಭದಲ್ಲೇ ಹೈಕೋರ್ಟ್ ಗೆ ಕೊರಚ-ಕೊರಮ ಸಮುದಾಯಕ್ಕೆ ದೇವಸ್ಥಾನದ ಬೈಲಾದಲ್ಲಿ ಪ್ರಾತಿನಿಧ್ಯ ನೀಡಿಲ್ಲ. ಹೀಗಾಗಿ ಚುನಾವಣೆಗೆ ತಡೆ ನೀಡುವಂತೆ ಕೋರಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ತಡೆಯಾಜ್ಞೆ ನೀಡಲಾಗಿತ್ತು.
ಈ ಬಳಿಕ ಚುನಾವಣಾಧಿಕಾರಿ ಹೈಕೋರ್ಟ್ ಆದೇಶದಂತೆ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದರು. ಆದರೇ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾರಿಕಾಂಬ ಹಿತರಕ್ಷಣಾ ಸಮಿತಿಯಿಂದ ತಡೆಯಾಜ್ಞೆ ತೆರವುಗೊಳಿಸುವಂತೆ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಹೈಕೋರ್ಟ್ ನಲ್ಲಿ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ತೆರವಿಗೆ ವಾದಿಸಿದ್ದೇನು?
ಆನಂದ್.ಎಂಡಿ, ಡಿಶ್ ಗುರು, ಪವಿತ್ರಾ ನಾಗರಾಜ್ ಸೇರಿದಂತೆ 72 ಮಂದಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಲ್ಲಿ ನಡೆಸಲಾಯಿತು. ಹಿರಿಯ ವಕೀಲ ದಿವಾಕರ್ ಅವರು ಈಗಾಗಲೇ ಶಿವಮೊಗ್ಗ ಜಿಲ್ಲಾ ನ್ಯಾಯಾಲಯವು ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ನಡೆಸಿ ಹೊಸ ಕಮಿಟಿಗೆ ಅಧಿಕಾರ ಹಸ್ತಾಂತರಿಸುವಂತ ಸೂಚಿಸಲಾಗಿದೆ. ಅದರಂತೆ ಚುನಾವಣೆ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. ನಾಮಪತ್ರ ಸಲ್ಲಿಕೆ ಕೂಡ ನಡೆದಿತ್ತು. ಈ ವೇಳೆಯಲ್ಲೇ ಚುನಾವಣೆಗೆ ತಡೆಯಾಜ್ಞೆ ನೀಡಿರುವುದು ಸರಿಯಲ್ಲ ಎಂಬುದಾಗಿ ವಾದಿಸಿದರು.
ಇನ್ನೂ ಮಾರಿಕಾಂಬ ದೇವಿ ಜಾತ್ರೆಯಲ್ಲಿ ಕೊರಚ-ಕೊರಮ ಸಮುದಾಯಕ್ಕೆ ವಾದ್ಯದ ಸೇವೆಯನ್ನು ಸಂಪೂರ್ಣವಾಗಿ ನೀಡಲಾಗಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವಂತ ಪ್ರಕ್ರಿಯೆ ಕೂಡ ಆಗಿದೆ. ಹೀಗಿದ್ದರೂ ಬೈಲಾದಲ್ಲಿ ಕೊರಚ-ಕೊರಮ ಸಮುದಾಯಕ್ಕೆ ಸ್ಥಾನ ಮಾನ ನೀಡಿಲ್ಲ ಎಂಬುದು ಸರಿಯಲ್ಲ. ದೇವಸ್ಥಾನ ಸಮಿತಿಯಲ್ಲಿ ಪ್ರಾತಿನಿಧ್ಯವನ್ನು ವಿರೂಪಾಕ್ಷಪ್ಪ ಎನ್ನುವವರು ಕೋರಿದ್ದು ಸರಿಯಲ್ಲ. ಒಂದು ವೇಳೆ ಪ್ರಶ್ನಿಸುವುದಿದ್ದರೇ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲೇ ಪ್ರಶ್ನಿಸಬೇಕಿತ್ತು. ಏಕಾಏಕಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಚುನಾವಣೆಗೆ ತಡೆಯಾಜ್ಞೆ ತಂದಿದ್ದು ದುರುದ್ದೇಶ ಪೂರಿತವಾದದ್ದು ಎಂಬುದಾಗಿ ನ್ಯಾಯಾಲಯದ ಗಮನಕ್ಕೆ ತಂದರು.

ಚುನಾವಣೆ ಘೋಷಣೆಯಾಗಿ, ಚುನಾವಣಾ ಪ್ರಕ್ರಿಯೆ ಆರಂಭಗೊಂಡ ವೇಳೆಯಲ್ಲೇ ಚುನಾವಣೆಗೆ ತಡೆಯಾಜ್ಞೆ ನೀಡಿದ್ದು ಸರಿಯಲ್ಲ. ಹಲವು ವರ್ಷಗಳಿಂದ ಹಳೆಯ ಕಮಿಟಿಯವರೇ ಮಾರಿಕಾಂಬ ದೇವಿ ಜಾತ್ರೆಯನ್ನು ನಡೆಸಿಕೊಂಡು ಬಂದಿದ್ದಾರೆ. ಅವ್ಯವಹಾರದಂತ ಆರೋಪಗಳು ಕೇಳಿ ಬಂದಿವೆ. ಈ ಎಲ್ಲದರ ಹಿನ್ನಲೆಯಲ್ಲಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ನೀಡಿರುವಂತ ತಡೆಯಾಜ್ಞೆ ತೆರವುಗೊಳಿಸುವಂತೆ ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್, ಚುನಾವಣೆಗೆ ಗ್ರೀನ್ ಸಿಗ್ನಲ್
ಈ ವಾದ ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಿ, ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಚುನಾವಣೆ ಪ್ರಕ್ರಿಯೆ ನಡೆಸಿ, ಹೊಸ ಸಮಿತಿಗೆ ಫೆಬ್ರವರಿಯಲ್ಲಿ ನಿಗದಿ ಯಾಗಿರುವಂತ ಜಾತ್ರೆಯನ್ನು ನಡೆಸೋದಕ್ಕೆ ಅಧಿಕಾರ ನೀಡುವಂತೆ ಆದೇಶಿಸಿದೆ. ಅಲ್ಲದೇ ಚುನಾವಣೆ ಬಳಿಕ ಕೋರ್ಟ್ ಗೆ ಮಾಹಿತಿ ನೀಡಲು ಸೂಚಿಸಿದೆ. ಹೀಗಾಗಿ ಮಾರಿಕಾಂಬ ಹಿತರಕ್ಷಣಾ ಸಮಿತಿಯ ಹೋರಾಟಕ್ಕೆ ಭರ್ಜರಿ ಗೆಲುವು ಸಿಕ್ಕಂತೆ ಆಗಿದೆ. ಅಲ್ಲದೇ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಮತ್ತೆ ಚುನಾವಣಾ ಪ್ರಕ್ರಿಯೆ ಗರಿಗೆದರಲಿದೆ.

ಅಂದಹಾಗೇ ಕೊರಚ-ಕೊರಮ ಸಮುದಾಯದ ಪರವಾಗಿ ಹಿರಿಯ ವಕೀಲ ಎಸ್.ವಿ ಪ್ರಕಾಶ್ ವಾದಿಸಿದರೇ, ಮಾರಿಕಾಂಬ ಹಿತರಕ್ಷಣಾ ಸಮಿತಿಯ ಪರವಾಗಿ ಹಿರಿಯ ವಕೀಲ ಸಮಿತ್ ಶಿವಾನಂದ್, ಅಭಿಷೇಕ್ ಅಚ್ಚಯ್ಯ ಮತ್ತು ರವಿಕುಮಾರ್ ವಾದಿಸಿದರು.
ಡಿಶ್ ಗುರು, ಮಂಜುನಾಥ ಎಲ್.ಎಂ ಕುರಿ ಪರವಾಗಿ ಹಿರಿಯ ವಕೀಲ ದಿವಾಕರ್, ಮಾರಿಕಾಂಬ ನ್ಯಾಸ ಪ್ರತಿಷ್ಠಾನದ ಪರವಾಗಿ ಪೃಥ್ವಿ ಹೊಡೆಯರ್ ವಾದಿಸಿದರು. ಆದರೇ ದೇವಸ್ಥಾನದ ಹಾಲಿ ಸಮಿತಿಯ ಯಾರೊಬ್ಬರು ಇಂದಿನ ಹೈಕೋರ್ಟ್ ಕಲಾಪಕ್ಕೆ ಹಾಜರಾಗಿರಲಿಲ್ಲ.
ಈ ವೇಳೆ ಮಾರಿಕಾಂಬ ಹಿತರಕ್ಷಣಾ ಸಮಿತಿಯ ಎಂ.ಡಿ ಆನಂದ್, ವಕೀಲರಾದಂತ ವಿ.ಶಂಕರ್, ಪ್ರೇಮ್ ಸಿಂಗ್, ಬಸವರಾಜ್, ಜಿ.ರವಿಕುಮಾರ್ ಹಾಜರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಹೀಗಿದೆ ಇಂದು ಬೆಳಗಾವಿಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ








