ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವಿಲೇವಾರಿಗಾಗಿ ವೈಜ್ಞಾನಿಕ ರೀತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ (ಎಸ್ಡಬ್ಲೂಎಂ) ಮಾಡಲು ಏಕರೂಪ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಜಾರಿಗೆ ತರುವಂತೆ ಹೈಕೋರ್ಟ್ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಕ್ಕೆ ನಿರ್ದೇಶನ ನೀಡಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್ ಡಬ್ಲೂಎಂಎಲ್) 2025ರ ಜುಲೈ 30ರಂದು ಬೆಂಗಳೂರು ಮಹಾನಗರದಲ್ಲಿ ಘನತ್ಯಾಜ್ಯ ವಿಲೇವಾರಿಗೆ 33 ಪ್ಯಾಕೇಜ್ಗಳಿಗೆ ಹೊರಡಿಸಿದ್ದ ಟೆಂಡರ್ ಪ್ರಶ್ನಿಸಿ ಹಲವು ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಎಲ್ಲ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.
ಬೆಂಗಳೂರಿನಲ್ಲಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ನಿರ್ದೇಶನಗಳನ್ನು ನೀಡಿರುವ ಪೀಠ, ಡಿಜಿಟಲ್ ಡ್ಯಾಶ್ಬೋರ್ಡ್, ಮೊಬೈಲ್ ಅಪ್ಲಿಕೇಶನ್, ಜಿಪಿಎಸ್ ಟ್ರ್ಯಾಕಿಂಗ್, ವೇಯ್ಟ್ ಬ್ರಿಡ್ಜ್ ಏಕೀಕರಣ ಮತ್ತು ಸಿಸಿಟಿವಿ ಕಣ್ಗಾವಲುಗಳನ್ನು ಒಳಗೊಂಡಿರಬೇಕು. ಅವುಗಳನ್ನು ಪ್ರತ್ಯೇಕ ಅಥವಾ ಸ್ವತಂತ್ರ ಯೋಜನೆಗಳಾಗಿ ನೋಡದೆ ಒಂದೇ, ಸುಸಂಘಟಿತ ಆಡಳಿತ ವ್ಯವಸ್ಥೆಯ ಆಂತರಿಕವಾಗಿ ಸಂಪರ್ಕ ಹೊಂದಿದ ಘಟಕಗಳಾಗಿರಬೇಕು ಎಂದು ತಿಳಿಸಿದೆ.
ಸಿಸಿಟಿವಿ ಕಣ್ಗಾವಲು ಜಾಲವು ಪ್ರಾಥಮಿಕ ದತ್ತಾಂಶ ಸಂಗ್ರಹಣೆ ಮತ್ತು ಜಾರಿ ಸಂವೇದಕ ಜಾಲವಾಗಿ ಕಾರ್ಯನಿರ್ವಹಿಸಬೇಕು. ಹೊಸ ವ್ಯವಸ್ಥೆ ವಿಶ್ಲೇಷಣಾತ್ಮಕ ಮತ್ತು ಕಾರ್ಯಾಚರಣೆಯ ಮಾಡ್ಯೂಲ್ಗಳಿಗೆ ನಿರ್ಣಾಯಕ ಮತ್ತು ರಿಯಲ್ ಟೈಮ್ ಮಾಹಿತಿ ಇಡಬೇಕು. ನಗರದ ನಾಗರಿಕರು ಕಸವನ್ನು ಸುರಿಯುವ ಬ್ಲಾಕ್ ಸ್ಪಾಟ್ಗಳ ಬಗ್ಗೆ ಅಪ್ಲಿಕೇಶನ್ ಮೂಲಕ ಮಾಹಿತಿ ನೀಡಿದರೆ ಅದರ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆಯಾಗಬೇಕು.
ಅಷ್ಟೇ ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆಲವು ದಿನಗಳಲ್ಲಿ ‘ನೋಡಲ್ ಮೇಲ್ವಿಚಾರಣಾ ಮತ್ತು ಅನುಷ್ಠಾನ ಸಮಿತಿ’ಯನ್ನು ರಚಿಸಬೇಕು. ಅದರ ಸಂಯೋಜನೆಯು ನ್ಯಾಯವ್ಯಾಪ್ತಿಯ ಸಂಘರ್ಷಗಳನ್ನು ಪೂರ್ವಭಾವಿಯಾಗಿ ನಿವಾರಿಸಲು ಮತ್ತು ಸಂಕೀರ್ಣ ನಗರ ಯೋಜನೆಗಳಿಗೆ ಅಡ್ಡಿಯಾಗುವ ಅಧಿಕಾರಶಾಹಿ ಅಡೆತಡೆಗಳನ್ನು ನಿವಾರಿಸುವಂತೆ ರೂಪಿಸಬೇಕು ಎಂದು ಪೀಠ ಸೂಚನೆ ನೀಡಿದೆ








