ಬೆಂಗಳೂರು : 14 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಅಪ್ರಾಪ್ತನಾಗಿದ್ದ ಯಾದಗಿರಿಯ ಚನ್ನಪ್ಪ ಎಂಬುವವರಿಗೆ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಬಾಲಾಪರಾಧಿಯನ್ನು ವಯಸ್ಕನೆಂದು ಪರಿಗಣಿಸಿ ಶಿಕ್ಷೆ ವಿಧಿಸಿದ್ದು ಕಾನೂನು ಬಾಹಿರ ಎಂದು ನ್ಯಾಯಪೀಠ ಹೇಳಿದೆ.
ತನ್ನ ಸಹೋದರಿಯ ಗಂಡನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಯಾದಗಿರಿಯ ಚನ್ನಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಸುನಿಲ್‌ದತ್ ಯಾದವ್ ಮತ್ತು ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ವಿಭಾಗೀಯ ಪೀಠ, ‘ಬಾಲಾಪರಾಧಿಯನ್ನು ವಯಸ್ಕನೆಂದು ತಪ್ಪಾಗಿ ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿರುವ ಸೆಷನ್ಸ್ ನ್ಯಾಯಾಲಯ ಕ್ರಮ ಕಾನೂನು ಬಾಹಿರ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಭೀಮರಾಯ ಎಂಬುವರು ಅರ್ಜಿದಾರ ಚನ್ನಪ್ಪ ಅವರ ಸಹೋದರಿಯನ್ನು ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು. ಇದರಿಂದ ಕೋಪಗೊಂಡಿದ್ದ 16 ವರ್ಷದ ಚೆನ್ನಪ್ಪ 2011 ರ ಏಪ್ರಿಲ್‌ನಲ್ಲಿಯಾದಗಿರಿ ಜಿಲ್ಲೆಹಳಿಸಗರದಲ್ಲಿಮತ್ತೊಬ್ಬ ಆರೋಪಿ ಸಾಯಿಬಣ್ಣ ಎಂಬುವರೊಂದಿಗೆ ಸೇರಿ ಭೀಮರಾಯನನ್ನು ಕೊಲೆ ಮಾಡಿದ್ದರು.
ಘಟನೆಯಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ಸಾಯಿಬಣ್ಣ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಮೃತಪಟ್ಟಿದ್ದರು. ಹೀಗಾಗಿ, ಸಾಯಿಬಣ್ಣ ವಿರುದ್ಧದ ಆರೋಪ ಕೈಬಿಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಯಾದಗಿರಿ ಸೆಷನ್ಸ್ ನ್ಯಾಯಾಲಯ, ಚನ್ನಪ್ಪನನ್ನು ವಯಸ್ಕನೆಂದು ಪರಿಗಣಿಸಿ 2018 ರಲ್ಲಿ ಜೀವಾವಧಿ ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿತ್ತು.
ಈ ಪ್ರಕರಣದಲ್ಲಿ ವಿಚಾರಣೆ ಆರಂಭದಿಂದಲೂ ದೋಷಪೂರಿತವಾಗಿದೆ. ಅಧಿಕಾರಿಗಳು ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮೊದಲ ಹಂತದಲ್ಲಿ ಬಾಲಾಪರಾಧಿಗಳನ್ನು ಗುರುತಿಸಬೇಕು. ಅಪರಾಧಿಯ ವಯಸ್ಸಿನ ಕುರಿತು ಯಾವುದೇ ಸಂಶಯ ಎದುರಾದಾಗ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ಬಂಧನಕ್ಕೆ ಆದೇಶಿಸುವಾಗ ಮತ್ತೊಮ್ಮೆ ಪರಿಶೀಲನೆಗೊಳಪಡಿಸಬೇಕು ಎಂದು ತಿಳಿಸಿದೆ.