ನಮ್ಮಲ್ಲಿ ಗೌರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ಹಬ್ಬಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಯಾಕೆಂದರೆ ಆ ದಿನ ಸ್ವರ್ಣ ಗೌರಿ ಪ್ರತಿಯೊಬ್ಬರ ಮನೆಗೆ ಬಂದು ಪೂಜೆ ಸ್ವೀಕರಿಗೆ ಧನ ಧಾನ್ಯ ಸಂಪತ್ತು ನೀಡುತ್ತಾಳೆ ಎಂದು ನಂಬಲಾಗುತ್ತದೆ. ಈ ಕತೆಯ ಹಿನ್ನಲೆ ಹೀಗಿದೆ.. ಒಮ್ಮೆ ಕೈಲಾಸದಲ್ಲಿ ತನ್ನ ಪತಿಯೊಂದಿಗೆ ಕುಳಿತ ಪಾರ್ವತೀದೇವಿ, ಪರಶಿವನ ಬಳಿ ತಾನು ತಾಯಿ ಮನೆಗೆ ಹೋಗಿಬರುತ್ತೇನೆ, ಅನುಜ್ಞೆ ಕೊಡು ಎಂದು ಪ್ರಾರ್ಥಿಸುತ್ತಾಳೆ. ಅದಕ್ಕೆ ಶಿವ ನಿನ್ನನ್ನು ಬಿಟ್ಟು ನಾನು ಹೇಗಿರಲಿ ಎಂದು ಕೇಳುತ್ತಾನೆ. ಆಕೆ ಮೂರು ದಿನಗಳ ಕಾಲ ಮಾತ್ರ ಇದ್ದು ಬರುವುದಾಗಿ ಹೇಳುತ್ತಾಳೆ. ಪಾರ್ವತಿಗೆ ತಾಯಿ ಮನೆ ಮೇಲಿರುವ ಪ್ರೀತಿ ಕಂಡು 3,5, 7ಎಷ್ಟು ದಿನ ಬೇಕಾದರೂ ಇದ್ದು ಬರಲು ಹೇಳುತ್ತಾನೆ. ಅದರಂತೆ ಮರುದಿನ ಪರಿವಾರದವರೊಂದಿಗೆ ತೆರಳಿ ಗೌರಿಯನ್ನು ಆಕೆಯ ತವರು ಮನೆಗೆ ಬಿಟ್ಟು ಬರುತ್ತಾನೆ.
ಬರುವಾಗ ನರಸಿಂಹನನ್ನು ಅರ್ಥಾತ್ ಶ್ರೀಹರಿಯನ್ನು ಆರಾಧಿಸುವ ಶ್ರೇಷ್ಠ ಶಿವಭಕ್ತರ ಮನೆಯಲ್ಲಿ ನೀನಿದ್ದು ಅವರ ಬಾಳಿನ ಬಡತನವ ಬಿಡಿಸಿ ಐಶ್ವರ್ಯಗಳ ಕೊಟ್ಟು ಬದುಕಿನ ಬವಣೆಗಳನ್ನು ಕಳೆದು, ಸಿರಿ ಸಂಪತ್ತುಗಳನ್ನು ಅವರಿಗೆ ಕರುಣಿಸಿ, ಪ್ರೀತಿಯ ಮಗಳಾಗಿ ಅವರ ಮನೆಯಲ್ಲಿ ಓಡಾಡಿಕೊಂಡಿರು. ನಂತರ ಬೇಗನೆ ಹಿಂದಿರುಗಿ ಬಾ ಎಂದು ಹೇಳುತ್ತಾನೆ. ಗೌರಿ ತಾನಾಗಿಯೇ ಸಡಗರ ಸಂಭ್ರಮದಿಂದ ತಾಯಿ ಮನೆಗೆ ಬಂದ ದಿನವನ್ನು ಗೌರಿ ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ. ಜೊತೆ ಗೌರಿ ತಾನು ಹೋದ ಮನೆಯಲ್ಲೆಲ್ಲ ಸುಖ ಸಂಪತ್ತನ್ನು ಕರುಣಿಸುತ್ತಾಳೆ.
ಇನ್ನು ಶಿವನಿಗೆ ತನ್ನ ನಲ್ಮೆಯ ಮಡದಿ ಪಾರ್ವತಿಯ ಮೇಲೆ ಅದೆಷ್ಟು ಪ್ರೀತಿಯೆಂದರೆ ಅವಳನ್ನು ಕರೆತರಲು ಮಾರನೆಯ ದಿವಸವೇ ಗಣಪತಿಯನ್ನು ಕೊಟ್ಟು ಕಳುಹಿಸುತ್ತಾರೆ. ಹೀಗಾಗಿ ತೃತೀಯಾ ತಿಥಿಯಂದು ಗೌರೀ ಹಬ್ಬ. ಅದರ ಮಾರನೆಯ ದಿವಸ ಚತುರ್ಥೀಯಂದು ಗಣಪತಿಯ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ.