ಬೆಂಗಳೂರು : “ಮೆಟ್ರೋ ದರ ಇಳಿಸಬೇಕು ಎಂದು ನಮ್ಮ ಸರ್ಕಾರ ಅಭಿಪ್ರಾಯವನ್ನು ಬಿಎಂಆರ್ ಸಿಎಲ್ ಗೆ ತಿಳಿಸಿದ್ದು, ಅಂತಿಮ ತೀರ್ಮಾನ ಕೇಂದ್ರ ಸಮಿತಿಯದ್ದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು.
ಬಿಎಂಆರ್ ಸಿಎಲ್ ಮೆಟ್ರೋ ಟಿಕೆಟ್ ದರ ಕಡಿಮೆ ಮಾಡಲು ಮುಂದಾಗಿರುವ ಬಗ್ಗೆ ಕೇಳಿದಾಗ, “ನಮಗೂ ಅದಕ್ಕೂ ಸಂಬಂಧವಿಲ್ಲ. ಈ ವಿಚಾರ ರಾಜ್ಯ ಸರ್ಕಾರದ ಸುಪರ್ದಿಗೆ ಬರಲ್ಲ, ಇದಕ್ಕಾಗಿಯೇ ಕೇಂದ್ರ ಸಮಿತಿ ರಚಿಸಲಾಗಿದೆ. ಜನರ ಮನವಿ ಆಲಿಸಿ ಮುಖ್ಯಮಂತ್ರಿಗಳು ಮೆಟ್ರೋ ದರ ಇಳಿಸುವ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ಜನಸಾಮಾನ್ಯರು ಹಾಗೂ ಮೆಟ್ರೋ ಹಿತಾಸಕ್ತಿ ಕಾಯಲು ಯಾವ ನಿರ್ಧಾರ ಮಾಡುತ್ತಾರೋ ಮಾಡಲಿ. ಈ ದರ ನಿಗದಿಗೆ ನ್ಯಾಯಾಧೀಶರ ನೇತೃತ್ವದ ಪ್ರತ್ಯೇಕ ಕೇಂದ್ರ ಸಮಿತಿ ಮಾಡಲಾಗಿದೆ. ಆ ಸಮಿತಿಗೆ ನಾವು ನಮ್ಮ ಅಭಿಪ್ರಾಯ ತಿಳಿಸುತ್ತೇವೆ, ಅಂತಿಮ ನಿರ್ಧಾರ ಅವರದು” ಎಂದು ತಿಳಿಸಿದರು.
“ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ಜತೆ ಬೆಳಗ್ಗೆ ಚರ್ಚೆ ಮಾಡಿದ್ದು, ಈ ದರವನ್ನು ಮರು ಪರಿಶೀಲನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ನಾನು ಹೇಳಿದ್ದೇವೆ. ಆದರೆ ಮೆಟ್ರೋ ದರ ಪರಿಷ್ಕರಣೆ ನಮ್ಮ ಕೈಯಲ್ಲಿ ಇಲ್ಲ. ಕೇಂದ್ರ ಸರ್ಕಾರದ ಕಾರ್ಯದರ್ಶಿಗಳೇ ಮೆಟ್ರೋಗೆ ಮುಖ್ಯಸ್ಥರಾಗಿದ್ದಾರೆ. ಮೆಟ್ರೋ ದರ ನಿಗದಿಗೆ ರಚಿಸಲಾಗಿರುವ ಸಮಿತಿ ಸಾಧಕ ಬಾಧಕಗಳನ್ನು ನೋಡಿ ತೀರ್ಮಾನ ಮಾಡುತ್ತದೆ. ದರ ಏರಿಕೆ ಮಾನದಂಡಗಳನ್ನು ಪರಿಶೀಲಿಸಿ, ಮತ್ತೆ ಲೆಕ್ಕಾಚಾರ ಮಾಡಿ ದರ ಕಡಿಮೆ ಮಾಡಲು ಸಮಿತಿಯ ಮುಂದೆ ಪ್ರಸ್ತಾಪ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ” ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಿತ್ತು ಅಂಕುಶ: ಹೀಗಿದೆ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯ ಹೈಲೈಟ್ಸ್
BREAKING: ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡನೆ | New Income Tax Bill