ಬೆಂಗಳೂರು: ಕಳೆದ ಸ್ವಲ್ಪ ದಿನಗಳಿಂದ ಬಿಡುವು ಬಿಟ್ಟಿದ್ದ ಮಳೆರಾಯ ಮತ್ತೆ ಅಬ್ಬರಿಸುತ್ತಿದ್ದಾನೆ. ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವೆಡೆ ಭಾರಿ ಮಳೆ ಶುರುವಾಗಿದೆ.
ರಾತ್ರಿ ಸುರಿದ ಧಾರಕಾರ ಮಳೆಗೆ ಜನಜೀವನ ಅಸ್ತವ್ಯಸ್ತಹೊಂಡಿದೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಗ್ರಾಮದ ರಸ್ತೆ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಾದ್ಯಂತೆ ನಿನ್ನೆ ರಾತ್ರಿ ಭಾರಿ ಪ್ರಮಾಣದಲ್ಲಿ ಗಾಳಿಯೊಂದಿಗೆ ಮಳೆ ಬೀಸಿತು. ಗಾಳಿ ಮತ್ತು ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೆನೆಕಟ್ಟುವ ಹಂತದಲ್ಲಿದ್ದ ಭತ್ತದ ಬೆಳೆ ನೆಲಕಚ್ಚಿದೆ.
ಕೆಲ ಗದ್ದೆಗಳಲ್ಲಿ ಬೆಳೆ ಸಂಪೂರ್ಣವಾಗಿ ಮಲಗಿದ್ದು, ಹಾಸಿಗೆ ಹಾಸಿದಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ ಬೆಳೆದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರದ್ದಾಗಿದೆ. ಇನ್ನು 20 ದಿನಗಳು ಕಳೆದರೆ ಭತ್ತ ಕಟಾವ್ ಆಗುತ್ತಿತ್ತು ಎಂದು ರೈತರು ಪರಿತಪಿಸುತ್ತಿದ್ದಾರೆ.