ಬೆಂಗಳೂರು : ರಾಜ್ಯದಾದ್ಯಂತ ಇಂದು ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿ ಸಿದ್ದು ಧಾರಾಕಾರ ಮಳೆಯಿಂದ ಕೆಲವು ಕಡೆ ಅವಾಂತರ ಸೃಷ್ಟಿಯಾಗಿರುವ ಘಟನೆಗಳು ವರದಿಯಾಗಿವೆ. ಬೆಂಗಳೂರು, ಚಿಕ್ಕಮಂಗಳೂರು, ಹಾಸನ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಪಿಣ್ಯ, ದಾಸರಹಳ್ಳಿ ಸೇರಿದಂತೆ ಸುತ್ತಮುತ್ತಲು ಧಾರಾಕಾರ ಮಳೆ ಆಗುತ್ತಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ದ್ವಿಚಕ್ರ ವಾಹನ ಸವಾರರು ತೀವ್ರ ಪರದಾಟ ನಡೆಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಕೂಡ ವರುಣ ಆರ್ಭಟಿಸುತ್ತಿದ್ದಾನೆ.
ಇತ್ತ ಹಾಸನ ಜಿಲ್ಲೆಯ ಹಲವಡೆ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಚನ್ನರಾಯಪಟ್ಟಣದ ಬಾಗೂರು ರಸ್ತೆ, ಸಂಪೂರ್ಣವಾಗಿ ಜಲಾವೃತಗೊಂಡಿದೆ.ರಸ್ತೆಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ವಾಹನಗಳು ಸಿಲುಕಿವೆ. ಹಿಂದೂ ರುದ್ರ ಭೂಮಿಯ ಸಿಬ್ಬಂದಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ಮಳೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳು ಸಂಪೂರ್ಣವಾಗಿ ಹಾನಿಯಾಗಿದೆ.
ಅಲ್ಲದೆ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕೂಡ ಮಳೆ ಮುಂದುವರೆದಿದೆ. ಬಯಲುಸೀಮೆ ಅಜ್ಜಂಪುರ ತಾಲೂಕಿನಾದ್ಯಂತ ಇದೀಗ ವರುಣಾರ್ಭಟ ಜೋರಾಗಿದೆ.ಧಾರಾಕಾರ ಮಳೆಗೆ ಗ್ರಾಮೀಣ ಪ್ರದೇಶದಲ್ಲಿ ಸೇತುವೆಗಳು ಜಲಾವೃತಗೊಂಡಿವೆ. ಅಜ್ಜಂಪುರ ತಾಲೂಕಿನ ದಂದೂರು ಚೀರನಹಳ್ಳಿ ಸಂಪರ್ಕ ಬಂದ್ ಆಗಿದೆ. ಸೇತುವೆ ಮೇಲೆ ಮೂರು ಅಡಿಯಷ್ಟು ಎತ್ತರದಲ್ಲಿ ನೀರು ಹರಿಯುತ್ತಿದೆ. ಶಿವನಿ ಸಮೀಪದ ಹೊಂಗೆ ಹಳ್ಳ ತುಂಬಿದ್ದರಿಂದ ಇದೀಗ ಎರಡು ಗ್ರಾಮಗಳ ನಡುವೆ ಸಂಪರ್ಕ ಬಂದ್ ಆಗಿದೆ.