ಬಾಗಲಕೋಟೆ : ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಪ್ರೇಮಿಗಳಿಗೆ ಜಾತಿ ಅಡ್ಡ ಬಂದಿದೆ. ಹೀಗಾಗಿ ತಮ್ಮ ಮದುವೆಗೆ ಮನೆಯವರು ಒಪ್ಪಿಲ್ಲವೆಂದು ಮನನೊಂದು ಪ್ರೇಮಿಗಳೆಬ್ಬರೂ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಂದಗಾವ ಗ್ರಾಮದಲ್ಲಿ ನಡೆದಿದೆ.
ಹೌದು ಗ್ರಾಮದ ಸಚಿನ್ ದಳವಾಯಿ(22), ಪ್ರಿಯಾ ಮಡಿವಾಳರ(19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು ಎಂದು ತಿಳಿದುಬಂದಿದೆ.ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಹುಡುಗನ ಮನೆಯವರು ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆಯೆ ಪರಿಹಾರ ಎಂದು ನೇಣಿಗೆ ಶರಣಾಗಿದ್ದಾರೆ.
ಸಚಿನ್ ದಳವಾಯಿ, ಪ್ರಿಯಾ ಮಡಿವಾಳರ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಪರಸ್ಪರ ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಬೇಕು ಎಂದು ನಿರ್ಧಾರ ತೆಗೆದುಕೊಂಡಿದ್ದರು. ಇಬ್ಬರದ್ದು ಬೇರೆ ಬೇರೆ ಜಾತಿಯಾಗಿದ್ದರಿಂದ ಸಚಿನ್ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಸಚಿನ್, ತಮ್ಮ ಪ್ರೇಯಸಿ ಪ್ರಿಯಾಳಿಗೆ ತಿಳಿಸಿದ್ದಾನೆ. ಇದರಿಂದ ಮನನೊಂದ ಪ್ರೇಮಿಗಳು ಗುರುವಾರ ರಾತ್ರಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಹಾಲಿಂಗಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.