ಮೈಸೂರು : ಎಸ್ಸಿ, ಎಸ್ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಈ ಮೂಲಕ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯನ್ನು ಒಪ್ಪಿಕೊಂಡಿದೆ. “SC ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ ಹೆಚ್ಚಿಸಲು ಮತ್ತು ST ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ.
ಈ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಎಸ್ ಸಿ , ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದ್ರೆ ನಿಮಗೆ ಓಟು ಸಿಗೋದಿಲ್ಲ ಎಂದು ವಾಗ್ಧಾಳಿ ನಡೆಸಿದರು.
ನ್ಯಾ.ನಾಗಮೋಹನ್ ದಾಸ್ ಅವರು ಎರಡು ವರ್ಷದ ಹಿಂದೆಯೇ ಮೀಸಲಾತಿ ಹೆಚ್ಚಳದ ವರದಿ ನೀಡಿದ್ದರು. ಈಗಅದನ್ನು ಅನುಷ್ಟಾನ ಮಾಡುತ್ತಿದ್ದಾರೆ. ಅದರ ಅರ್ಥ ಏನೆಂದು ಎಲ್ಲರಿಗೂ ಗೊತ್ತಿದೆ ಎಂದರು.
ರಾಜಕೀಯ ಮುಖಂಡರುಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಮೀಸಲಾತಿ ಹೋರಾಟವನ್ನು ಹುಟ್ಟು ಹಾಕಿದ್ದಾರೆ, ಮುಂದೆ ಒಂದು ದಿನಅದು ಅವರಿಗೆ ತಿರುಗುಬಾಣ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಸರ್ಕಾರ ಜೇನುಗೂಡಿಗೆ ಕಲ್ಲು ಒಡೆಯುವ ಕೆಲಸ ಮಾಡುತ್ತಿದೆ ಎಂದರು.
ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗ (SSC) 20,000 ಹುದ್ದೆ ಆಯ್ಕೆಗೆ ಹಿಂದಿ-ಇಂಗ್ಲೀಷ್ʼನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ಯಾವ ರಾಜ್ಯಕ್ಕಾದರೂ ಕಳುಹಿಸಬಹುದು. ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶವಿಲ್ಲ. ಹಿಂದಿ ಹೇರಿಕೆ, ಭಾಷಾ ತಾರತಮ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ್ದ ಅವರು, ಕೇಂದ್ರ ಸರಕಾರಕ್ಕೆ ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕಲೇಬೇಕು ಎನ್ನುವ ಕೆಟ್ಟ ಹಠವಿದ್ದಂತೆ ಇದೆ. ಕನ್ನಡವೂ ಸೇರಿ ದಕ್ಷಿಣದ ಪ್ರಾದೇಶಿಕ ಭಾಷೆಗಳ ಬಗ್ಗೆ ಇನ್ನಿಲ್ಲದ ಅಸಹನೆ, ದ್ವೇಷ ಮೈಗೂಡಿಸಿಕೊಂಡಿದೆ ಎನಿಸುತ್ತಿದೆ. ತ್ರಿಭಾಷಾ ಸೂತ್ರಕ್ಕೆ ಹೇಗಾದರೂ ಸಮಾಧಿ ಕಟ್ಟಲೇಬೇಕೆಂದು ಹೊರಟಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.