ಕೆಜಿಎಫ್/ಕೋಲಾರ: ಬಿಇಎಂಎಲ್ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಭರವಸೆ ನೀಡಿದರು.
ಕೆಜಿಎಫ್ ನಲ್ಲಿ ಕಳೆದ 13 ದಿನಗಳಿಂದ ಕಾರ್ಮಿಕರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಕೋಲಾರ ಸಂಸದ ಮಲ್ಲೇಶ್ ಬಾಬು, ಶಾಸಕರಾದ ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್ ಅವರೊಂದಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು ಸಚಿವರು.
“ನಿಮ್ಮ ಬೇಡಿಕೆಗಳ ಬಗ್ಗೆ ಈಗಾಗಲೇ ಕಂಪನಿಯ ಸಿಎಂಡಿ (ಅಧ್ಯಕ್ಷ – ವ್ಯವಸ್ಥಾಪಕ ನಿರ್ದೇಶಕ) ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ನಾನು ನಾಳೆ (ಸೋಮವಾರ) ಬೆಳಗ್ಗೆ ದೆಹಲಿಗೆ ತೆರಳುತ್ತಿದ್ದು, ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಸಿಂಗ್ ಅವರಿಗೆ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಇದ್ದು, ನಿಮ್ಮ ಸಮಸ್ಯೆಗಳಿಗೆ ಅವರು ಖಂಡಿತಾ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎನ್ನುವ ಭರವಸೆ ಇದೆ” ಎಂದರು ಸಚಿವರು.
ಉದ್ಯೋಗ ಖಾಯಂ, ವೇತನ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಕಳೆದ 13 ದಿನಗಳಿಂದ ಧರಣಿ ನಡೆಸುತ್ತಿರುವ ನಿಮ್ಮ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಾನು ಇಲ್ಲಿಗೆ ಬರುವುದಕ್ಕೆ ಮೊದಲೇ ಬಿಇಎಂಎಲ್ ಸಿಎಂಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದೆ. ಉದ್ಯೋಗ ಖಾಯಂ ವಿಷಯ ಒಂದು ಮಾತ್ರ ನನ್ನ ಕೈಯ್ಯಲ್ಲಿ ಇಲ್ಲ, ಉಳಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ನಾವು ಪರಿಶೀಲನೆ ಮಾಡಲು ಸಿದ್ಧರಿದ್ದೇವೆ. ಕಾರ್ಮಿಕರು ಧರಣಿ ಅಂತ್ಯಗೊಳಿಸಿ ಕೆಲಸಕ್ಕೆ ಹಾಜರಾದರೆ, ಈ ಬಗ್ಗೆ ಕೂತು ಚರ್ಚೆ ನಡೆಸಲು ನಾವು ತಯಾರಿದ್ದೇವೆ ಎಂದು ಅವರು ನನಗೆ ತಿಳಿಸಿದರು ಎಂಬುದಾಗಿ ಸಚಿವರು ಕಾರ್ಮಿಕರ ಸಭೆಯಲ್ಲಿ ಹೇಳಿದರು.
ಬಿಇಎಂಎಲ್ ಕೇಂದ್ರ ಸರಕಾರಿ ಸ್ವಾಮ್ಯದ ಬೃಹತ್ ಕೈಗಾರಿಕೆ. 13 ದಿನಗಳಿಂದ ಧರಣಿಗೆ ಅವಕಾಶ ಮಾಡಿಕೊಡುವ ಪರಿಸ್ಥಿತಿ ಸೃಷ್ಟಿ ಆಗಿದ್ದೇ ಕಳವಳಕಾರಿ. ಇದು ಕಂಪನಿಗಾಗಲಿ, ದೇಶಕ್ಕಾಗಲಿ ಅಥವಾ ಕಾರ್ಮಿಕರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಆದ್ದರಿಂದ ನನ್ನ ಮಾತಿನ ಮೇಲೆ ಭರವಸೆ ಇಡಿ. ತಕ್ಷಣ ನಿಮ್ಮ ಧರಣಿ ಅಂತ್ಯಗೊಳಿಸಿ ಕೆಲಸಕ್ಕೆ ಹಾಜರಾಗಿ. ನಾನು ಗುರುವಾರದೊಳಗೆ ರಕ್ಷಣಾ ಸಚಿವರ ಜತೆ ಚರ್ಚೆ ನಡೆಸಿದ ಬಳಿಕ ಶುಕ್ರವಾರ ಬೆಳಗ್ಗೆ ನಾನೇ ಸ್ವತಃ ಇಲ್ಲಿಗೆ ಬಂದು ನಿಮ್ಮೆಲ್ಲರಿಗೂ ಒಳ್ಳೆಯ ಸುದ್ದಿ ಕೊಡುತ್ತೇನೆ ಎಂದು ಮನವಿ ಮಾಡಿದರು ಕೇಂದ್ರ ಸಚಿವರು.
ನಿಮ್ಮಗಳ ಕುಟುಂಬಗಳಿಗೆ ಒಳ್ಳೆಯದಾಗುವ ರೀತಿಯಲ್ಲಿ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ, ಇದು ನನ್ನ ಜವಾಬ್ದಾರಿ. ನೀವು ಮೊದಲು ಕೆಲಸಕ್ಕೆ ಹೋಗಿ, ಇಷ್ಟು ದಿನ ಧರಣೆ ಕೂತರೆ ಯಾರಿಗೂ ಶ್ರೇಯಸ್ಕರ ಅಲ್ಲ. ಶನಿವಾರ ಈ ವಿಷಯ ನನ್ನ ಗಮನಕ್ಕೆ ಬಂತು. ಭಾನುವಾರ ನಿಮ್ಮ ಬಳಿಗೆ ಬಂದಿದ್ದೇನೆ. ನರೇಂದ್ರ ಮೋದಿ ಅವರ ಸರಕಾರ ಕೆಲಸ ಮಾಡುವ ರೀತಿ ಇದು ಎಂದು ಸಚಿವರು ಹೇಳಿದರು.
ಇದಕ್ಕೂ ಮೊದಲು ಕೇಂದ್ರ ಸಚಿವರು ಕಾರ್ಮಿಕ ಮುಖಂಡರ ಮನವಿಗಳನ್ನು ಆಲಿಸಿದರು. ಬಳಿಕ ಸಚಿವರ ಮಾತಿಗೆ ಸ್ಪಂದಿಸಿದ ಕಾರ್ಮಿಕರು; ಈ ಕೂಡಲೇ ನಾವು ಕೆಲಸಕ್ಕೆ ಹಾಜರಾಗಬೇಕು ಎನ್ನುವ ನಿಮ್ಮ ಒತ್ತಾಸೆಯ ಬಗ್ಗೆ ಚರ್ಚೆ ನಡೆಸುತ್ತೇವೆ. ಇಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಕಳಕಳಿಗೆ ವಿರುದ್ಧವಾದ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಹೇಳಿದರು.
ಮಾಜಿ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಮಾಜಿ ಶಾಸಕರಾದ ಸಂಪಂಗಿ, ನಾರಾಯಣ ಸ್ವಾಮಿ ಸೇರಿದಂತೆ ಅನೇಕ ಮುಖಂಡರು, ವಿವಿಧ ಸಂಘಟನೆಗಳ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಆಧಾರ್ ಕಾರ್ಡ್ ಪಡೆಯುವುದು ಮತ್ತಷ್ಟು ಸರಳ: ಜಸ್ಟ್ ಹೀಗೆ ಮಾಡಿ | Aadhaar Card
ಶಿವಮೊಗ್ಗ: ‘ಅಕ್ಷಯಸಾಗರ ಬೆಳ್ಳಿ ಭವನ’ ಲೋಕಾರ್ಪಣೆಗೊಳಿಸಿದ ‘ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ’