ನವದೆಹಲಿ : 500 ವರ್ಷಗಳ ಹಿಂದೂಗಳ ಕನಸು ಇದೀಗ ನನಸಾಗಿದ್ದು, ಐತಿಹಾಸಿಕ ರಾಮ ಮಂದಿರ ನಿರ್ಮಾಣವಾಗಿದ್ದಕ್ಕೆ ಮಾಜಿ ಪ್ರಧಾನಿ HD ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಆಗಿರುವುದು ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ. ರಾಮ ಮಂದಿರ ಉದ್ಘಾಟನೆ ದಿನ ನಾನು ಮತ್ತು ನನ್ನ ಹೆಂಡತಿ ಅಯೋಧ್ಯೆಗೆ ಹೋಗಿದ್ವಿ. ಆ ಒಂದು ಅಭೂತಪೂರ್ವವಾದ ಕ್ಷಣಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಭವ್ಯ ಮಂದಿರ ಮುಂದಿನ ಪೀಳಿಗೆಗೂ ಸಾಕ್ಷಿಯಾಗಲಿದೆ ಎಂದರು.
ಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿ ತುಂಬಾ ಶ್ರಮಿಸಿದ್ದಾರೆ. ಅವರ ಪ್ರಾಮಾಣಿಕ ಪ್ರಯತ್ನ ಮಂದಿರ ವಿಚಾರದಲ್ಲಿ ಆಗಿದೆ. ರಾಮ ಧರ್ಮವನ್ನ ಪಾಲಿಸಿದ ವ್ಯಕ್ತಿ. ರಾಮ ಅಂದರೆ ಭಕ್ತಿ, ಪ್ರೀತಿ. ಗಾಂಧೀಜಿ ಸಮೇತ ರಾಮನ ಬಗ್ಗೆ ಮಾತನಾಡುತ್ತಿದ್ದರು. ರಾಮನ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣ ಆಗಿರುವುದು ಹೆಮ್ಮೆಯ ಸಂಗತಿ. ಮಂದಿರ ನಿರ್ಮಾಣ ಆಗಿ ರಾಮನ ಮೂರ್ತಿ ಸಹ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮ ಮಂದಿರದ ಬಗ್ಗೆ ನನಗೆ ಬಹಳ ಸಂತಸ ಇದೆ ಎಂದರು.