ಬೆಂಗಳೂರೂ : ಬೆಂಗಳೂರು ಮಹಾನಗರದಲ್ಲಿನ ಅನಧಿ ಕೃತ ಪ್ಲೆಕ್ಸ್ ಬ್ಯಾನರ್ ಮತ್ತು ಬಂಟಿಂಗ್ ತೆರವು ವಿಚಾರದಲ್ಲಿ ತಪ್ಪಿತಸ್ಥ ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿಯನ್ನು ಹೈಕೋರ್ಟ್ ಗುರು ವಾರ ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವುದೂ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯವೇ ಕ್ರಮ ಜರುಗಿಸುತ್ತದೆ ಎಂದು ಎಚ್ಚರಿಕೆ ನೀಡಿದೆ.
ಆಕ್ರಮ ಬ್ಯಾನರ್, ಹೋರ್ಡಿಂಗ್ ತೆರವುಗೊಳಿಸುವಂತೆ ಕೋರಿ ಮಾಯೇಗೌಡ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಿಜೆ ಪಿ.ಬಿ.ವರ್ಲೆ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ಅರ್ಜಿದಾರರ ಪರ ವಕೀಲಜಿ.ಆರ್.ಮೋಹನ್,ಬೆಂಗಳೂರು ಮಹಾನಗರದ ಎಲ್ಲಾ ಪ್ರದೇಶಗಳಲ್ಲಿ ಅಕ್ರಮ ಪ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ ರಾರಾಜಿಸುತ್ತಿವೆ. ಆದರೆ, ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ ಪಾಲಿಕೆ ಅವುಗಳನ್ನು ತೆರವುಗೊಳಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಗಮನಸೆಳೆದರು.
ನ್ಯಾಯಾಲಯ ಹಲವು ಬಾರಿ ನಿರ್ದೇಶನ ನೀಡಿದ್ದರೂ ಅಕ್ರಮ ಬ್ಯಾನರ್ ಹೋರ್ಡಿಂಗ್‌ಗಳ ಅಳವಡಿಕೆಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಪಾಲಿಕೆ ಏಕೆ ಹಿಂದೇಟು ಹಾಕುತ್ತಿದೆ,ಎಂದು ನ್ಯಾಯಪೀಠ ಕೇಳಿತು. ಅಲ್ಲದೆ, 2023ರ ಆ.2ರಂದು ಅಕ್ರಮ ಬ್ಯಾನರ್, ಪ್ಲೆಕ್ಸ್ ಮತ್ತು ಹೋರ್ಡಿಂಗ್ ಕಂಡು ಬಂದರೆ ಅದಕ್ಕೆ ಪಾಲಿಕೆಗೆ ತಲಾ ಒಂದು ಲಕ್ಷ ರೂ.ದಂಡ ವಿಧಿಸಬೇಕಾಗುತ್ತದೆ,’l ಎಂದು ಎಚ್ಚರಿಕೆ ನೀಡಿದ್ದನ್ನು ಮತ್ತೆ ಪಾಲಿಕೆಗೆ ಪುನರುಚ್ಚರಿಸಿತು.
ನ್ಯಾಯಾಲಯ ಮತ್ತೊಬ್ಬ ಅರ್ಜಿದಾರರ ಪರ ಹಾಜರಾದ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್, ನಗರದ ಬಹುತೇಕ ಜನದಟ್ಟಣೆ ಪ್ರದೇಶಗಳಲ್ಲಿ ಹೋರ್ಡಿಂಗ್ಸ್ ಮತ್ತು ಬ್ಯಾನರ್ ವ್ಯಾಪಕವಾಗಿ ತಲೆಯೆತ್ತಿವೆ ಮತ್ತು ಅವುಗಳಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿರುವುದಲ್ಲದೆ, ವಾಹನ ಸಂಚಾರಕ್ಕೂ ಅಡಚಣೆಯಾಗುತ್ತಿದೆ,ಎಂದು ನ್ಯಾಯಪೀಠಕ್ಕೆ ತಿಳಿಸಿದರು.ಆಗ ನ್ಯಾಯಪೀಠ, ತಪ್ಪಿತಸ್ಥ ಅಧಿ ಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಈ ಮೊದಲೇ ಸೂಚನೆ ನೀಡಿದ್ದರೂ ಪಾಲಿಕೆ ಏಕೆ ಏನೂ ಕ್ರಮ ಕೈಗೊಂಡಿಲ್ಲ.ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿತು.
ಕೊನೆಯಲ್ಲಿ ಹಿಂದಿನ ಆದೇಶಗಳಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ? ಒಂದು ವೇಳೆ ಅಂತಹ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುವುದೂ ಸೇರಿದಂತೆ ಏನೇನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಬಗ್ಗೆ ಎರಡು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಯನ್ನು ಫೆ. 20ಕ್ಕೆ ಮುಂದೂಡಿತು. ಒಂದು ವೇಳೆ ಪಾಲಿಕೆ ತಪ್ಪಿತಸ್ಥ ಅಧಿ ಕಾರಿಗಳ ವಿರುದ್ಧ ಕ್ರಮ ಜರುಗಿಸದೇ ಹೋದರೆ ನ್ಯಾಯಾಲಯವೇ ಕ್ರಮಕ್ಕೆ ಆದೇಶಿಸಬೇಕಾಗುತ್ತದೆ ಎಂದೂ ನ್ಯಾಯಪೀಠ ಎಚ್ಚರಿಕೆ ನೀಡಿದೆ.